ಲಕ್ನೋ: ಸಸ್ಯಾಹಾರಿ ಕುಟುಂಬವೊಂದು ಲಕ್ನೋದ ಚೈನೀಸ್ ರೆಸ್ಟೋರೆಂಟ್ ನಿಂದ ಜನಪ್ರಿಯ ಆಹಾರ ವಿತರಣಾ ಅಪ್ಲಿಕೇಶನ್‌ನ ಮೂಲಕ ಚಿಲ್ಲಿ ಪನ್ನೀರ್ ಆರ್ಡರ್ ಮಾಡಿತ್ತು. ಆದರೆ, ಅವರಿಗೆ ಪನ್ನೀರ್ ಬದಲಿಗೆ ಚಿಲ್ಲಿ ಚಿಕನ್ ವಿತರಣೆಯಾಗಿದೆ. ಹೀಗಾಗಿ ಕುಟುಂಬ ಪೊಲೀಸರಿಗೆ ದೂರು ನೀಡಿದ್ದು, ಜನಪ್ರಿಯ ಆಹಾರ ವಿತರಣಾ ಅಪ್ಲಿಕೇಶನ್‌ನ ಡೆಲಿವರಿ ಎಕ್ಸಿಕ್ಯೂಟಿವ್ ಮತ್ತು ಲಕ್ನೋದ ಚೈನೀಸ್ ರೆಸ್ಟೋರೆಂಟ್‌ನ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ.
ರಾಕೇಶ್ ಕುಮಾರ್ ಶಾಸ್ತ್ರಿ ಎಂಬುವವರ ಕುಟುಂಬವು ಆಕಸ್ಮಿಕವಾಗಿ ಭಕ್ಷ್ಯವನ್ನು ಸೇವಿಸಿದೆ. ಅಕ್ಟೋಬರ್ 9 ರಂದು ಶಾಸ್ತ್ರಿ ಮತ್ತು ಅವರ ಕುಟುಂಬವು ಆಲಂಬಾಗ್‌ನಲ್ಲಿರುವ ಚೈನೀಸ್ ತಿನಿಸು ರೆಸ್ಟೋರೆಂಟ್‌ನಿಂದ ಜನಪ್ರಿಯ ಅಪ್ಲಿಕೇಶನ್ ಮೂಲಕ ಆಹಾರವನ್ನು ಆರ್ಡರ್ ಮಾಡಿದ ನಂತರ ಈ ಘಟನೆ ನಡೆದಿದೆ.
ದೂರಿನಲ್ಲಿ ಉಲ್ಲೇಖಿಸಿರುವ ಶಾಸ್ತ್ರೀ ಕುಟುಂಬ, ಲಕ್ನೋದ ಅಲಂಬಾಗ್ ಪ್ರದೇಶದಲ್ಲಿನ ಚೈನೀಸ್ ರೆಸ್ಟೋರೆಂಟ್‌ನಿಂದ ಚಿಲ್ಲಿ ಪನೀರ್ ಅನ್ನು ಆರ್ಡರ್ ಮಾಡಿದೆವು. ಆದರೆ, ನಮಗೆ ಚಿಲ್ಲಿ ಪನೀರ್ ಬದಲು, ರೆಸ್ಟೋರೆಂಟ್ ಮತ್ತು ಡೆಲಿವರಿ ಬಾಯ್, ಮಾಂಸಾಹಾರಿ ಖಾದ್ಯವನ್ನು ಕಳುಹಿಸಿದ್ದಾರೆ. ನಮಗೆ ಅದರ ಅರಿವಿಲ್ಲದೆ ಮಾಂಸಹಾರಿ ಭಕ್ಷ್ಯವನ್ನು ಸೇವಿಸುವಂತಾಯ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದರಿಂದ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಅಲ್ಲದೆ ತಮ್ಮ ಕುಟುಂಬದ ಆರೋಗ್ಯವು ಹದಗೆಟ್ಟಿದೆ ಎಂದು ಅವರು ಆರೋಪಿಸಿದ್ರು.
ಪೊಲೀಸರು ಡೆಲಿವರಿ ಎಕ್ಸಿಕ್ಯೂಟಿವ್ ಮತ್ತು ರೆಸ್ಟೋರೆಂಟ್ ಮಾಲೀಕರ ವಿರುದ್ಧ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.