ಬೆಂಗಳೂರು: ರಾಜ್ಯದಲ್ಲಿ ಮಳೆ, ರೋಗಬಾಧೆ ಮತ್ತಿತರ ಕಾರಣಗಳಿಂದ ತರಕಾರಿ ಪೂರೈಕೆ ಕಡಿಮೆಯಾಗಿದೆ. ಬಹುತೇಕ ಎಲ್ಲಾ ತರಕಾರಿಗಳ ದರ ಭಾರಿ ಏರಿಕೆಯಾಗಿದ್ದು, ಜನಸಾಮಾನ್ಯರು ಕಂಗಾಲಾಗಿದ್ದಾರೆ.
ಕಳೆದ ಎರಡು ತಿಂಗಳಿನಿಂದ ಏರುಗತಿಯಲ್ಲಿ ಸಾಗುತ್ತಿದ್ದ ತರಕಾರಿ ದರ ಶತಕ ದಾಟಿದೆ. ಟೊಮೇಟೊ ದರ ಕೆಜಿಗೆ 100 ರೂ., ಬೀನ್ಸ್ 200 ರೂ., ಕ್ಯಾಪ್ಸಿಕಂ 110 ರೂ., ಬದನೆಕಾಯಿ 100ರೂ., ಬಜ್ಜಿ ಮೆಣಸಿನಕಾಯಿ 98 ರೂ., ಮೂಲಂಗಿ 70 ರೂ., ನುಗ್ಗೆಕಾಯಿ 185 ರೂ., ಬೆಳ್ಳುಳ್ಳಿ 340 ರೂ.ವರೆಗೆ ಏರಿಕೆಯಾಗಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಸರಕು ಸಾಗಣೆ ವೆಚ್ಚ ದುಬಾರಿಯಾಗಿ ತರಕಾರಿ ದರ ಮತ್ತಷ್ಟು ಹೆಚ್ಚಾಗಿದೆ. ಕಳೆದ ತಿಂಗಳವರೆಗೆ ಮಳೆಯ ಕೊರತೆಯಾಗಿತ್ತು. ನಂತರ ಕೆಲವು ಕಡೆ ಮಳೆ ಹೆಚ್ಚಿದ ಕಾರಣ ತರಕಾರಿ ಬೆಳೆ ಹಾಳಾಗಿದೆ. ಹೀಗಾಗಿ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಬೇಡಿಕೆ ಇರುವಷ್ಟು ತರಕಾರಿ ಪೂರೈಕೆ ಆಗುತ್ತಿಲ್ಲ ಇದರೊಂದಿಗೆ ಸರಕು ಸಾಗಣಿ ದರ ಕೂಡ ಹೆಚ್ಚಾಗಿರುವುದರಿಂದ ತರಕಾರಿ ದರ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.