ಹಾಟ್ ಡಾಗ್ ಅಂದ್ರೆ ಮೃದು ಬನ್ ಆಕಾರದ ಒಂದು ವಿಧ. ಹೊರ ದೇಶಗಳಲ್ಲಿ ಇವುಗಳ ಡಿಶ್, ವೆರೈಟಿಗಳಲ್ಲಿ ಸಿಗುತ್ತವೆ. ಬೆಳಗ್ಗಿನ ತಿಂಡಿಗೆ ಹಾಗೂ ಪಾರ್ಟಿಗಳಿಗೆ ಹಾಟ್ ಡಾಗ್ ಹೆಚ್ಚಾಗಿ ಬಳಸಲಾಗುತ್ತೆ. ನಾಲಿಗೆಗೆ ರುಚಿಕರ ಮತ್ತು ಮಕ್ಕಳಿಗೂ ಪ್ರಿಯ. ಹಾಗಾದ್ರೆ ವೆಜ್ ಹಾಟ್ ಡಾಗ್ ರೋಲ್ ತಯಾರಿಸೋದು ಹೇಗೆ ತಿಳಿಯಿರಿ.
ಬೇಕಾಗುವ ಸಾಮಾಗ್ರಿಗಳು :
ಹಾಟ್ ಡಾಗ್ ರೋಲ್-4 (ಬೇಕರಿಯಲ್ಲಿ ಸಿಗುತ್ತದೆ), ಟೊಮ್ಯಾಟೋ – 1, ತುರಿದ ಕ್ಯಾರೆಟ್ – 2, ಹೆಚ್ಚಿದ ಎಲೆಕೋಸು 1 ಕಪ್, ದೊಣ್ಣೆ ಮೆಣಸಿನಕಾಯಿ -1 , ಈರುಳ್ಳಿ – 2, ಆಲೂಗಡ್ಡೆ – 1, ವಿನೆಗರ್-2 ಟೀ ಸ್ಪೂನ್, ಸೋಯಾ ಸಾಸ್ – 1 ಟೀ ಸ್ಪೂನ್, ಮೆಣಸು ಅರ್ಧ ಟೀ ಸ್ಪೂನ್, ಟೊಮ್ಯಾಟೋ ಕೆಚ್ ಅಪ್ ಸ್ವಲ್ಪ, ಚೀಸ್ 1 ಟೇಬಲ್ ಸ್ಪೂನ್, ಎಣ್ಣೆ ಮತ್ತು ಉಪ್ಪು.
ತಯಾರಿಸುವ ವಿಧಾನ :
ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಈರುಳ್ಳಿ ಹಾಕಿ ಕೆಂಪಗೆ ಹುರಿಯಿರಿ. ಇದಕ್ಕೆ ಹೆಚ್ಚಿದ ಆಲೂಗಡ್ಡೆ ಹಾಕಿ ಒಂದು ನಿಮಿಷ ಬಾಡಿಸಿ. ಅದಕ್ಕೆ ಹೆಚ್ಚಿದ ಟೊಮ್ಯಾಟೋ, ಕೋಸು, ದೊಣ್ಣೆ ಮೆಣಸಿನ ಕಾಯಿ, ಕ್ಯಾರೆಟ್ ಹಾಕಿ ಬೇಯಿಸಿ. ಆನಂತರ ವಿನೆಗರ್, ಸೋಯಾ ಸಾಸ್, ಉಪ್ಪು, ಮೆಣಸಿನ ಪುಡಿ ಹಾಕಿ ಕೆದಕಿ. ತುಂಬಾ ಹೊತ್ತು ಬೇಯಿಸಬಾರದು.
ಹಾಟ್ ಡಾಗ್ ರೋಲ್ ಗಳನ್ನು ಉದ್ದುದ್ದಕ್ಕೆ ಪದರವಾಗಿ ಸೀಳಿ ಒಳ ಭಾಗಕ್ಕೆ ಟೊಮ್ಯಾಟೋ ಕೆಚ್ ಅಪ್ ಹಚ್ಚಿ. ಒಳಗೆ ಬೇಯಿಸಿದ ತರಕಾರಿ ಹಾಕಿ. ಅದರ ಮೇಲೆ ಸಣ್ಣದಾಗಿ ಹೆಚ್ಚಿದ ಈರುಳ್ಳಿ ಹಾಕಿ. ಅದರ ಮೇಲೆ ಚೀಸ್ ತುರಿ ಹಾಕಿ. ಈ ಹೂರಣ ತುಂಬಿದ ರೋಲ್ಸ್ ಅನ್ನು ಓವನ್ ನಲ್ಲಿಡಿ. ಓವನ್ ಅನ್ನು 300 ಡಿಗ್ರಿ ಫ್ಯಾರೆನ್ ಹೀಟ್ ಗೆ ಸೆಟ್ ಮಾಡಿ. ಚೀಸ್ ಕರಗುವವರೆಗೂ ಬೇಯಿಸಿ. ನಂತರ ಬಿಸಿ ಇದ್ದಾಗಲೇ ಸಾಸ್ ಜೊತೆ ಸವಿಯಲು ಕೊಡಿ.