alex Certify ಮನೆ ಇಲ್ಲದ ಬಡವರಿಗೆ ಗುಡ್ ನ್ಯೂಸ್: ರಾಜ್ಯದಲ್ಲಿ 5 ಲಕ್ಷ ಮನೆ ನಿರ್ಮಿಸಿ ಹಂಚಿಕೆ ಗುರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಇಲ್ಲದ ಬಡವರಿಗೆ ಗುಡ್ ನ್ಯೂಸ್: ರಾಜ್ಯದಲ್ಲಿ 5 ಲಕ್ಷ ಮನೆ ನಿರ್ಮಿಸಿ ಹಂಚಿಕೆ ಗುರಿ

ಕಲಬುರಗಿ: ಪ್ರಧಾನಮಂತ್ರಿ‌ ನರೇಂದ್ರ ಮೋದಿ ಅವರ ಆಶಯದಂತೆ ನಮ್ಮ ಸರ್ಕಾರದ ಅವಧಿಯಲ್ಲಿಯೇ 5 ಲಕ್ಷ‌ ಮನೆ‌ ನಿರ್ಮಿಸಿ ಬಡವರಿಗೆ ಹಂಚುವ ಗುರಿ ಹೊಂದಲಾಗಿದೆ ಎಂದು ರಾಜ್ಯದ ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ. ಸೋಮಣ್ಣ ಅವರು ತಿಳಿಸಿದರು.

ಇದಕ್ಕಾಗಿ 6600 ಕೋಟಿ ರೂ. ಒದಗಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಪ್ಪಿಗೆ ಸೂಚಿಸಿದ್ದಾರೆ ಎಂದರು.

ಸೇಡಂ ಪಟ್ಟಣದಲ್ಲಿ ಸೇಡಂ-ಚಿಂಚೋಳಿ ರಸ್ತೆಯಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಪ್ರಧಾನಮಂತ್ರಿ ಆವಾಸ್ ಯೋಜನೆ-ಸರ್ವರಿಗೂ ಸೂರು ಯೋಜನೆಯಡಿ 12 ಎಕರೆ ಪ್ರದೇಶದಲ್ಲಿ 48 ಕೋಟಿ ರೂ. ವೆಚ್ಚದೊಂದಿಗೆ ಜಿ+2 ಮಾದರಿಯ 750 ಮನೆಗಳ‌ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ‌ ನಂತರ ಪಟ್ಟಣದ ಶ್ರೀ ಕೊತ್ತಲ ಬಸವೇಶ್ವರ ದೇವಾಲಯ ಆವರಣದಲ್ಲಿ ಆಯೋಜಿಸಿದ ಸಾರ್ವಜನಿಕ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ತಾಂತ್ರಿಕ ಕಾರಣದಿಂದ ಕಳೆದ‌ ಹಲವಾರು ವರ್ಷಗಳಿಂದ ರಾಜ್ಯಕ್ಕೆ 18 ಲಕ್ಷ ಮನೆ, 6 ಲಕ್ಷ ನಿವೇಶನ ಮಂಜೂರಾತಿಗೆ ಬಾಕಿ ಇದ್ದವು. ನಮ್ಮ ಸರ್ಕಾರ ತಾಂತ್ರಿಕ ದೋಷವನ್ನು ಸರಿದೂಗಿಸಿದ ಪರಿಣಾಮ ಇಷ್ಟು ಸಂಖ್ಯೆಯ ಮನೆ, ನಿವೇಶನಗಳನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ಮಂಜೂರು ಮಾಡಿದೆ. ಇದರಿಂದ ಸೂರಿಲ್ಲದವರಿಗೆ ಸೂರು ಕಲ್ಪಿಸಬೇಕೆಂಬ ರಾಜ್ಯ ಸರ್ಕಾರದ ಆಶಯಕ್ಕೆ ಹೆಚ್ಚಿನ ಶಕ್ತಿ ಬಂದಿದೆ ಎಂದರು.

ಸೇಡಂ ಪಟ್ಟಣದ ಚಿಂಚೋಳಿ ರಸ್ತೆಯಲ್ಲಿನ 750 ಮನೆಗಳ‌ ನಿರ್ಮಾಣ ಕಾರ್ಯ ಬರುವ ಡಿಸೆಂಬರ್ ಒಳಗೆ ‌ಮುಗಿಸಬೇಕು. ಮನೆಗಳು ಗುಣಮಟ್ಟದಿಂದ ಇರಬೇಕು. ರಸ್ತೆ, ಚರಂಡಿ, ವಿದ್ಯುತ್ ಸೇರಿದಂತೆ ಇಲ್ಲಿ ಸಮುದಾಯ ಭವನ, ಅಂಗನವಾಡಿ ಕಟ್ಟಡ ಹಾಗೂ ಅರೋಗ್ಯ ಕೇಂದ್ರ ನಿರ್ಮಿಸುವ ಮೂಲಕ ಎಲ್ಲಾ ರೀತಿಯ ಮೂಲಸೌಕರ್ಯ ಕಲ್ಪಿಸಬೇಕು ಎಂದು ಸ್ಥಳದಲ್ಲಿದ್ದ ಕೊಳಗೇರಿ ಅಭಿವೃದ್ಧಿ ಮಂಡಳಿಯ ಆಯುಕ್ತ ಬಿ.ವೆಂಕಟೇಶ, ಅವರಿಗೆ ನಿರ್ದೇಶನ‌ ನೀಡಿದರು.

ಶಾಸಕ ರಾಜಕುಮಾರ ಪಾಟೀಲ ಕೋರಿಕೆಯಂತೆ ಪಟ್ಟಣದಲ್ಲಿ ಪುರಸಭೆಯು 25 ಎಕರೆ ಜಮೀನು ನೀಡಿದರೆ ಮತ್ತೆ 2000 ಮನೆ ನಿರ್ಮಿಸಿ ಕೊಡಲಾಗುವುದು ಎಂದು ಸಚಿವ‌ ವಿ.ಸೋಮಣ್ಣ ಅವರು ಭರವಸೆ ನೀಡಿದರು.

ಗ್ರಾಮೀಣ ಭಾಗದಲ್ಲೂ ಮನೆ ನಿರ್ಮಿಸಿ ಬಡವರಿಗೆ ನೀಡಲು ನಿರ್ಧರಿಸಿದ್ದು, ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಪಟ್ಟಿ ಕಳುಹಿಸಲು ಶೀಘ್ರವೆ ಜಿಲ್ಲಾ ಪಂಚಾಯತ್ ಸಿ‌.ಇ.ಓಗಳೊಂದಿಗೆ ಸಭೆ ಕರೆದು ಚರ್ಚಿಸುವೆ ಎಂದರು.

ರಾಜಕಾರಣ‌ ಚುನಾವಣೆ‌ ನಡೆಯುವ‌ ಒಂದು ತಿಂಗಳಿಗೆ ಸೀಮಿತವಾಗಿರಬೇಕು. ನಿಂದಕರ ಬಗ್ಗೆ ತಲೆಕೆಡಿಸಿಕೊಳ್ಳದೆ ದೂರದೃಷ್ಠಿ ಚಿಂತನೆಯೊಂದಿಗೆ ಕ್ಷೇತ್ರದ‌ ಜನತೆಗೆ ಜನಪರ ಕಾರ್ಯಕ್ರಮ ನೀಡುವತ್ತ ಗಮನ ಹರಿಸಿ. ಜನರ‌ ಆಶೀರ್ವಾದ ನಿಮ್ಮ ಮೇಲಿರಲಿದೆ ಎಂದು ಶಾಸಕ ರಾಜಕುಮಾರ ಪಾಟೀಲ ಅವರಿಗೆ ಸಲಹೆ ನೀಡಿದರು.

ಶಾಸಕ ಡಾ.ರಾಜಕುಮಾರ ಪಾಟೀಲ ತೇಲ್ಕೂರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸೇಡಂ ಕ್ಷೇತ್ರಕ್ಕೆ ಈಗಾಗಲೆ 1000 ಮನೆ ಮಂಜೂರು ಮಾಡಿದಕ್ಕಾಗಿ ವಸತಿ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಅವರು ನನ್ನ ಕ್ಷೇತ್ರದಲ್ಲಿ ಸೂರಿಲ್ಲದವರು ಯಾರು ಇರಬಾರದೆಂಬ ಗುರಿ ಹೊಂದಿದ್ದು, ಪುರಸಭೆಯಿಂದ ಇನ್ನೂ 25 ಎಕರೆ ಜಮೀನು ಕೊಡತ್ತೀವಿ, ಇನ್ನೂ 2000 ಮನೆ ನಿರ್ಮಿಸಿಕೊಡಬೇಕೆಂದು ಸಚಿವರಲ್ಲಿ ಮನವಿ ಮಾಡಿದರು.

ಸಂಸದ ಡಾ.ಉಮೇಶ ಜಾಧವ ಅವರು ಮಾತನಾಡಿ, ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ ಬಡವರಿಗೆ ಮನೆ ಒದಗಿಸುವ‌ ಮಹತ್ತರ ಕಾರ್ಯ‌ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡುತ್ತಿದ್ದು, ಇದಕ್ಕಾಗಿ ರಾಜ್ಯಗಳಿಗೆ ಹೆಚ್ಚಿನ ಅನುದಾನ‌ ನೀಡುತ್ತಿದ್ದಾರೆ. ಹರ್ ಘರ್ ಜಲ್ ಯೋಜನೆಯಡಿ ಗ್ರಾಮೀಣ ಭಾಗದ ಪ್ರತಿ ಮನೆಗೆ ನೀರಿನ ನಲ್ಲಿ ಸಂಪರ್ಕ ಒದಗಿಸಲಾಗುತ್ತಿದೆ ಎಂದರು.

ಸೇಡಂನ ಶ್ರೀ ಕೊತ್ತಲ ಬಸವೇಶ್ವರ ಸಂಸ್ಥಾನ ಮಠದ ಪೂಜ್ಯ ಶ್ರೀ ಸದಾಶಿವ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಶಾಸಕ ಬಸವರಾಜ ಮತ್ತಿಮೂಡ, ವಿಧಾನ ಪರಿಷತ್ ಶಾಸಕ‌ ಬಿ.ಜಿ.ಪಾಟೀಲ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಸದಸ್ಯ ನಾಗರಾಜ ಎಂ.ಬಿರಾದರ, ಸೇಡಂ‌ ಪುರಸಭೆ ಅಧ್ಯಕ್ಷೆ ಚೆನ್ನಮ್ಮ ಬಿ. ಪಾಟೀಲ, ಉಪಾಧ್ಯಕ್ಷ ಶಿವಾನಂದ ಸ್ವಾಮಿ, ಕೊಳಗೇರಿ ಅಭಿವೃದ್ಧಿ ಮಂಡಳಿಯ ಆಯುಕ್ತ ಬಿ.ವೆಂಕಟೇಶ, ತಾಂತ್ರಿಕ ನಿರ್ದೇಶಕ ಬಿ.ಎಂ.ಕಪನಿಗೌಡ, ತಹಶೀಲ್ದಾರ ಬಸವರಾಜ ಬೆಣ್ಣೆಶಿರೂರ, ಮುಖ್ಯಾಧಿಕಾರಿ ಆರ್.ಪ್ರಹ್ಲಾದ್, ಎಇಇ ಮಲ್ಲಿಕಾರ್ಜುನ, ಇಂಜಿನೀಯರ್ ಲಕ್ಷ್ಮೀಕಾಂತ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...