ಹೊರಗಿನ ಊಟ ಅಥವಾ ತಿಂಡಿ ಸೇವಿಸುವಾಗ ಪದಾರ್ಥದ ನೈರ್ಮಲ್ಯದ ಬಗ್ಗೆ ಸಾಕಷ್ಟು ಅನುಮಾನವಿರುತ್ತದೆ. ಶುಚಿತ್ವ ಕಾಪಾಡುವುದಿಲ್ಲವೆಂದು ಹಲವರು ಹೊರಗಿನ ತಿಂಡಿ ತಿನ್ನುವುದಿಲ್ಲ.
ಇದೇ ರೀತಿ ಶುಚಿತ್ವದ ಬಗ್ಗೆ ದೊಡ್ಡ ಅನುಮಾನ ಹುಟ್ಟಿಸುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡು ಗ್ರಾಹಕರ ಹುಬ್ಬೇರಿಸಿದೆ. ಪನೀರ್ ಪ್ರಿಯರಂತೂ ಮತ್ತೊಮ್ಮೆ ಪನೀರ್ ತಿನ್ನಲು ಸಾವಿರ ಬಾರಿ ಯೋಚಿಸುವಂತಾಗಿದೆ.
ಅದೇನೆಂದರೆ, ಪನೀರ್ ತಯಾರಿ ವೇಳೆ ವ್ಯಕ್ತಿಯೊಬ್ಬರು ಪನೀರ್ ಮೇಲೆ ಕುಳಿತಿದ್ದಾರೆ. ಲುಂಗಿ ಉಟ್ಟುಕೊಂಡಿರುವ ವ್ಯಕ್ತಿಯೊಬ್ಬರು ಪನೀರ್ ಮೇಲೆ ಕುಳಿತಿರುವ ಫೋಟೋ ವೈರಲ್ ಆಗಿದ್ದು ಇದು ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿರುವ ಘಟನೆಯ ಚಿತ್ರ ಎನ್ನಲಾಗಿದೆ.
ಬ್ರಾಂಡೆಡ್ ಅಲ್ಲದ ಪನೀರ್‌ಗಳನ್ನು ಖರೀದಿಸಬಾರದು. ಇಲ್ಲಿ ಇದೇ ರೀತಿ ಸ್ವಚ್ಛತೆ ಇರುವುದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ಆದರೆ ಇದಕ್ಕೆ ಪರ- ವಿರೋಧದ ಅಭಿಪ್ರಾಯ ವ್ಯಕ್ತವಾಗಿದೆ.
ಸ್ಥಳೀಯವಾಗಿ ತಯಾರಿಸಿದ ಉತ್ಪನ್ನಗಳನ್ನು ಅಪಹಾಸ್ಯ ಮಾಡಿರುವುದನ್ನ ಬೆಂಬಲಿಸದ ಹಲವರು ಬ್ರಾಂಡೆಡ್ ಉತ್ಪನ್ನಗಳಿಗೂ ಇದು ಅನ್ವಯಿಸುತ್ತದೆ ಎಂದು ಸಲಹೆ ನೀಡಿದ್ದಾರೆ. ಇಲ್ಲಿ ವ್ಯಕ್ತಿ ಲುಂಗಿ ಧರಿಸಿದ್ದಾರೆ, ಆದ್ದರಿಂದ ಅದು ನೈರ್ಮಲ್ಯವಾಗಿದೆ. ಅವರು ಅದರ ಮೇಲೆ ಬಟ್ಟೆಯಿಲ್ಲದೆ ಕುಳಿತಿದ್ದರೆ ಸಮಸ್ಯೆಯಾಗುತ್ತಿತ್ತು ಎಂದಿದ್ದಾರೆ. ಮತ್ತೆ ಕೆಲವರು ಮನೆಯ ಊಟವೇ ಬೆಸ್ಟ್ ಎಂದಿದ್ದಾರೆ.