ಉತ್ತರ ಪ್ರದೇಶದ ಕಾಶಿ ವಿಶ್ವನಾಥ ದೇವಾಲಯದ ಸಮೀಪದಲ್ಲಿರುವ ಜ್ಞಾನವಾಪಿ ಮಸೀದಿ ಕಾಂಪೌಂಡ್ನ ಭೌತಿಕ ಸಮೀಕ್ಷೆ ನಡೆಸುವಂತೆ ಭಾರತೀಯ ಪುರಾತತ್ವ ಇಲಾಖೆಗೆ ಸೂಚನೆ ನೀಡಿರುವ ವಾರಣಾಸಿ ಸಿವಿಲ್ ನ್ಯಾಯಾಲಯದ ಆದೇಶಕ್ಕೆ ಅಲಹಾಬಾದ್ ಹೈಕೋರ್ಟ್ ತಡೆ ನೀಡಿದೆ.
ವಾರಣಾಸಿ ಸಿವಿಲ್ ಕೋರ್ಟ್ನ ಆದೇಶವನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದ ಮಸೀದಿಯ ಸಮಿತಿಯು ಆರಾಧನಾ ಸ್ಥಳ 1991 ಆ್ಯಕ್ಟ್ನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿತ್ತು. 1991ರ ಆರಾಧನಾ ಸ್ಥಳ ಕಾಯ್ದೆಯ ಪ್ರಕಾರ 1947ರ ಆಗಸ್ಟ್ 15ಕ್ಕಿಂತಲೂ ಮೊದಲಿನಿಂದ ಅಸ್ತಿತ್ವದಲ್ಲಿರುವ ಯಾವುದೇ ಪೂಜಾ ಸ್ಥಳವನ್ನು ಇನ್ನೊಂದು ದೇಗುಲವಾಗಿ ಪರಿವರ್ತನೆ ಮಾಡಲು ಸಾಧ್ಯವಿಲ್ಲ.
ಈ ಪ್ರಕರಣದ ಸಂಬಂಧ ಹೈಕೋರ್ಟ್ ಆದೇಶ ಕಾಯ್ದಿರಿಸಿದ್ದ ಸಂದರ್ಭದಲ್ಲಿ ಸ್ಥಳೀಯ ನ್ಯಾಯಾಲಯವು ಆದೇಶ ನೀಡಿದೆ. ಈ ಬಗ್ಗೆ ಹೈಕೋರ್ಟ್ ಸೂಕ್ತ ನಿರ್ಧಾರ ಕೈಗೊಳ್ಳುವವರೆಗೂ ಕೆಳ ಹಂತದ ನ್ಯಾಯಾಲಯವು ಯಾವುದೇ ಆದೇಶ ನೀಡುವಂತಿಲ್ಲ ಎಂದು ಹಿರಿಯ ವಕೀಲ ಎಸ್ಎಫ್ಎ ನಖ್ವಿ ಹೇಳಿದ್ದಾರೆ.
ಏಪ್ರಿಲ್ 8ರಂದು ಇಬ್ಬರು ಹಿಂದೂ, ಇಬ್ಬರು ಮುಸ್ಲಿಂ ಹಾಗೂ ಓರ್ವ ಪುರಾತತ್ವ ಇಲಾಖೆಯ ಸದಸ್ಯರನ್ನು ಒಳಗೊಂಡ ವಾರಣಾಸಿ ನ್ಯಾಯಾಲಯದ ಪಂಚ ಸದಸ್ಯ ಪೀಠ ಶತಮಾನದಷ್ಟು ಪುರಾತನ ಇತಿಹಾಸವುಳ್ಳ ಜ್ಞಾನವಾಪಿ ಮಸೀದಿ ಸಂಕೀರ್ಣದ ಭೌತಿಕ ಸಮೀಕ್ಷೆಯ ಮೇಲ್ವಿಚಾರಣೆ ನಡೆಸಲು ಆದೇಶ ನೀಡಿತ್ತು.