ಪುದೀನಾ ಸೊಪ್ಪನ್ನು ಅಡುಗೆ ಮನೆಯಲ್ಲಿ ಬಳಸಿ ನಿಮಗೆ ಅಭ್ಯಾಸವಿದೆಯೇ, ಸೌಂದರ್ಯವರ್ಧಕವಾಗಿ ಅದನ್ನು ಹೇಗೆ ಬಳಸಬಹುದು ಎಂಬುದನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ ಕೇಳಿ.
ಪುದೀನಾ ಸೊಪ್ಪಿನಲ್ಲಿ ಬ್ಯಾಕ್ಟೀರಿಯಾ ನಿರೋಧಕ ಗುಣವಿದ್ದು ಅದರಿಂದ ಮೊಡವೆ ಮತ್ತು ತ್ವಚೆಯ ಉರಿಯೂತದಂಥ ಸಮಸ್ಯೆಗಳಿಗೆ ಪರಿಹಾರ ಕೊಡುತ್ತದೆ. ವಿಟಮಿನ್ ಎ ಹೇರಳವಾಗಿರುವ ಪುದೀನಾವನ್ನು ಹಿಚುಕಿದಾಗ ಬರುವ ಪರಿಮಳಕ್ಕೆ ಕಾರಣ ಮೆಂಥಾಲ್. ಇದು ನೋವನ್ನು ಗುಣಪಡಿಸುವ ಗುಣ ಹೊಂದಿದೆ.
ತುರಿಕೆ ಕಜ್ಜಿ ಮೊದಲಾದ ತ್ವಚೆಗೆ ಸಂಬಂಧಿಸಿದ ಕ್ರೀಮ್ ಗಳಲ್ಲಿ ಮೆಂಥಾಲ್ ಅನ್ನು ಕಡ್ಡಾಯವಾಗಿ ಬಳಸಿರುತ್ತಾರೆ. ನೀವು ಪುದೀನಾ ಎಲೆಗಳ ಪೇಸ್ಟ್ ಅನ್ನೇ ತಯಾರಿಸಿ ಕಜ್ಜಿ ಅಥವಾ ಮೊಡವೆಗಳ ಮೇಲೆ ಲೇಪಿಸಿಕೊಳ್ಳುವುದರಿಂದ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.
ಕಾಲು ಕಪ್ ತಾಜಾ ಎಲೆಗಳನ್ನು ಸ್ವಚ್ಛವಾಗಿ ತೊಳೆದು ಸಣ್ಣ ಉರಿಯಲ್ಲಿಟ್ಟು ನೀರು ಹಾಕಿ ಕುದಿಸಿ. ತಣಿದ ಬಳಿಕ ಟವೆಲ್ ಅನ್ನು ಈ ನೀರಿಗೆ ಅದ್ದಿ ಮೂರು ನಿಮಿಷ ಬಿಡಿ. ಮತ್ತೆ ಹಿಂಡಿ, ಕುದಿಸಿ ಆರಿಸಿದ ನೀರಿಗೆ ಮುಳುಗಿಸಿ ಮುಖದ ಮೇಲಿಡಿ. ಹೀಗೆ ಕನಿಷ್ಠ 5 ಬಾರಿ ಪುನರಾವರ್ತಿಸಿ. ಮೊಡವೆ ಕಜ್ಜಿಯಂಥ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗುತ್ತದೆ.