ಜೀವನದಲ್ಲಿ ಚಿಕ್ಕ ಸಮಸ್ಯೆ ಬಂದರೂ ಅದನ್ನು ಎದುರಿಸಲಾಗದೇ ಭಯಪಡುವವರು ಹಲವರು. ಅಂಥವರ ನಡುವೆ ಇಲ್ಲೊಬ್ಬ ಆಶಾವಾದಿ ಕಾಣುತ್ತಾನೆ. ಕ್ಯಾನ್ಸರ್ನಿಂದಾಗಿ ಒಂದು ಕಣ್ಣು ಕಳೆದುಕೊಂಡಿದ್ದರೂ ಜೀವನೋತ್ಸಾಹ ಮೆರೆದು ಕೃತಕ ಕಣ್ಣನ್ನು ತಯಾರಿಸಿ ಅದರಿಂದ ದೃಷ್ಟಿ ಪಡೆದಿರುವ ಅಪರೂಪದ ವ್ಯಕ್ತಿ ಈತ.
ಅಮೆರಿಕದ ಇಂಜಿನಿಯರ್ ಬ್ರಿಯಾನ್ ಸ್ಟಾನ್ಲಿ, ಅವರು ಕ್ಯಾನ್ಸರ್ನಿಂದ ಕಣ್ಣು ಕಳೆದುಕೊಂಡ ನಂತರ, ತಮ್ಮ ಈ ದುರದೃಷ್ಟಕ್ಕೆ ಅಳುತ್ತಾ ಕುಳಿತುಕೊಳ್ಳಲಿಲ್ಲ. ತಮ್ಮನ್ನು ತಾವು ನವೋದ್ಯಮಿ ಎಂದು ಕರೆದುಕೊಳ್ಳುವ ಬ್ರಿಯಾನ್ ಅವರು, ಐ ಪ್ಯಾಚ್ ಅಥವಾ ಕೃತಕ ಕಣ್ಣು ಖರೀದಿಸುವ ಬದಲು ತಮ್ಮದೇ ಆದ ಪ್ರಾಸ್ಥೆಟಿಕ್ ಕಣ್ಣನ್ನು ರಚಿಸಿ ಅದರಲ್ಲಿ ಯಶಸ್ವಿಯಾಗಿದ್ದಾನೆ.
ಪ್ರಾಸ್ಥೆಟಿಕ್ ಕಣ್ಣು ಬ್ಯಾಟರಿಯ ರೂಪದಲ್ಲಿ ಕಾರ್ಯನಿರ್ವಹಿಸುತ್ತದೆ. ಇದರ ಬೆಳಕಿನ ಮೂಲಕ ದೃಷ್ಟಿಯನ್ನೂ ಪಡೆದಿದ್ದಾನೆ. ವೈಜ್ಞಾನಿಕ ಕಾಲ್ಪನಿಕ ಚಲನಚಿತ್ರದಲ್ಲಿ ರೋಬೋಟ್ ಅಥವಾ ಆಂಡ್ರಾಯ್ಡ್‌ನಂತೆ ಈ ಕೃತಕ ಕಣ್ಣು ಕಾಣಿಸುತ್ತದೆ. ಈ ಕುರಿತು ಈತ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಇದು ಭಾರಿ ಸದ್ದು ಮಾಡುತ್ತಿದೆ. ಎಂಜಿನಿಯರ್ ಕಾರ್ಯಕ್ಕೆ ಜಾಲತಾಣದಲ್ಲಿ ಶ್ಲಾಘನೆಗಳ ಮಹಾಪೂರವೇ ಹರಿದು ಬರುತ್ತಿದೆ.