ಬೆಂಗಳೂರು: ರಂಜಾನ್ ಹಿನ್ನೆಲೆಯಲ್ಲಿ ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಉರ್ದು ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅವಧಿ ಬದಲಾವಣೆ ಮಾಡಲಾಗಿದೆ.
ರಂಜಾನ್ ಉಪವಾಸ ಆರಂಭದ ದಿನದಿಂದ ಏಪ್ರಿಲ್ 10ರವರೆಗೆ ಶಾಲಾ ಅವಧಿಯನ್ನು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12:45 ರವರೆಗೆ ನಡೆಸುವಂತೆ ಶಿಕ್ಷಣ ಇಲಾಖೆ ಸೂಚಿಸಿದೆ. ಕಡಿಮೆಯಾಗುವ ಶಾಲೆಗಳ ಕೆಲಸದ ಅವಧಿಯನ್ನು ಇತರೆ ರಜಾ ದಿನಗಳಲ್ಲಿ ಕಾರ್ಯನಿರ್ವಹಿಸಿ ಸರಿದೂಗಿಸುವಂತೆ ಸೂಚಿಸಲಾಗಿದೆ.
ರಾಜ್ಯದ ಸರ್ಕಾರಿ ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಪ್ರತಿದಿನ ಸಂಜೆ ಅರ್ಧ ಗಂಟೆ ಮುಂಚಿತವಾಗಿ ತೆರಳಲು ಅನುಮತಿ ನೀಡಬಹುದು. ಆದರೆ, ಈ ಅವಧಿಯಲ್ಲಿ ನಡೆಯುವ ಎಸ್ಎಸ್ಎಲ್ಸಿ, 5 ಮತ್ತು 8ನೇ ತರಗತಿ ಬೋರ್ಡ್ ಪರೀಕ್ಷೆಗಳು ನಿಗದಿತ ವೇಳಾಪಟ್ಟಿಯಂತೆ ನಡೆಯಲಿವೆ ಎಂದು ಶಿಕ್ಷಣ ಇಲಾಖೆ ಆಯುಕ್ತರು ಹೇಳಿದ್ದಾರೆ.