ಮೀರತ್: ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ಮಹಿಳೆಗೆ ತಂಪು ಪಾನೀಯದಲ್ಲಿ ಮತ್ತು ಬರಿಸುವ ವಸ್ತು ಹಾಕಿಕೊಟ್ಟು ಪ್ರಜ್ಞೆ ತಪ್ಪಿಸಿ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ.
ಮೀರತ್ ಜಿಲ್ಲೆಯ ರೋಹ್ತಾ ಪ್ರದೇಶದ ಹೋಟೆಲ್ ನಲ್ಲಿ ಈ ಘಟನೆ ನಡೆದಿದೆ. ಏತನ್ಮಧ್ಯೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಲ್ಲಿ ಒಬ್ಬ ಜಿಮ್ ಮಾಲೀಕನಾಗಿದ್ದಾನೆ. ಮೂರನೇ ಆರೋಪಿ ತಲೆಮರೆಸಿಕೊಂಡಿದ್ದಾನೆ. ಸಂತ್ರಸ್ತೆಗೆ ಪಾನೀಯದಲ್ಲಿ ನಿದ್ದೆ ಮಾತ್ರೆ ಕೊಟ್ಟು ಆರೋಪಿಗಳು ಇಂತಹ ಕೃತ್ಯವೆಸಗಿದ್ದಾರೆ.
ರೋಹ್ತಾ ನಿವಾಸಿಯಾದ ಒಬ್ಬ ಅಮರ್ಪಾಲ್ ರಸ್ನಾ ರಸ್ತೆಯಲ್ಲಿ ಹೋಟೆಲ್ ಹೊಂದಿದ್ದಾನೆ. ಹೋಟೆಲ್ ನ ಮೊದಲ ಮಹಡಿಯಲ್ಲಿ ಅಮರಪಾಲ್ ಮಗ ಉಜ್ವಲ್ ಜಿಮ್ ನಡೆಸುತ್ತಿದ್ದಾನೆ. ಉಜ್ವಲ್ ಮತ್ತು ಆತನ ಇಬ್ಬರು ಸ್ನೇಹಿತರು ಮಹಿಳೆಯನ್ನು ಹೋಟೆಲ್ ಗೆ ಕರೆತಂದಿದ್ದಾರೆ. ನಿದ್ದೆ ಮಾತ್ರೆ ಹಾಕಿದ್ದ ತಂಪು ಪಾನೀಯವನ್ನು ಕೊಟ್ಟಿದ್ದಾರೆ. ನಂತರ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಮಹಿಳೆಗೆ ಪ್ರಜ್ಞೆ ಬಂದಾಗ ಸಂಬಂಧಿಕರಿಗೆ ಕರೆ ಮಾಡಿ ತಿಳಿಸಿದ್ದಾಳೆ. ಸಂಬಂಧಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು ಅವರು ಕೂಡಲೇ ಸ್ಥಳಕ್ಕೆ ತಲುಪಿದ್ದಾರೆ. ಸ್ಥಳದಲ್ಲಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತ ಇಬ್ಬರು ಆರೋಪಿಗಳನ್ನು ಜಿಮ್ ಮಾಲೀಕ ಉಜ್ವಲ್ ಮತ್ತು ಸೌರಭ್ ಎಂದು ಗುರುತಿಸಲಾಗಿದೆ. ಮೂರನೇ ಆರೋಪಿ ಮೋನು ಪರಾರಿಯಾಗಿದ್ದಾನೆ. ಮಹಿಳೆಯ ದೂರಿನ ನಂತರ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ರೋಹ್ತಾ ಇನ್ಸ್ ಪೆಕ್ಟರ್ ಉಪೇಂದ್ರ ಸಿಂಗ್ ತಿಳಿಸಿದ್ದಾರೆ. ಆರೋಪಿಗಳನ್ನು ಜೈಲಿಗೆ ಕಳುಹಿಸಲಾಗಿದೆ. ಪೊಲೀಸರು ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ. ಆಕೆಯ ಹೇಳಿಕೆಯನ್ನು ದಾಖಲಿಸಿದ್ದಾರೆ.