ಗಣೇಶ ಮೂರ್ತಿ ವಿಸರ್ಜನೆ ವೇಳೆ ಓರ್ವ ಮಹಿಳೆ ಸೇರಿದಂತೆ ಐವರು ಜಲಸಮಾಧಿಯಾದ ಘಟನೆ ಉತ್ತರ ಪ್ರದೇಶದ ಸದತ್ಗಂಜ್ನಲ್ಲಿ ನಡೆದಿದೆ. ಮೃತ ಮಹಿಳೆ ಶವವನ್ನು ನದಿಯಿಂದ ಹೊರ ತೆಗೆಯಲಾಗಿದೆ. ಉಳಿದ ನಾಲ್ವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಸದತ್ಗಂಜ್ ನಿವಾಸಿಯಾಗಿದ್ದ ನಾರಾಯಣ ಧಾರ್ ಪಾಂಡೆ (58) ತಮ್ಮ ಮನೆಯಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರು. ಭಾನುವಾರ ನೆರೆಹೊರೆಯವರ ಜೊತೆ ಸೇರಿ ಕಲ್ಯಾಣಿಯಲ್ಲಿ ಮೂರ್ತಿ ವಿಸರ್ಜನೆಗೆ ತೆರಳಿದ್ದರು. ಭಾರೀ ಮಳೆಯಿಂದಾಗಿ ಕಲ್ಯಾಣಿಯಲ್ಲಿ ನೀರು ಹೆಚ್ಚಾಗಿತ್ತು. ನಾರಾಯಣ್ ಧರ್ ಪಾಂಡೆ ಹಾಗೂ ಧರ್ಮೇಂದ್ರ ಪಾಂಡೆ (20) ನೀರಿನಲ್ಲಿ ಕೊಚ್ಚಿಕೊಂಡು ಹೋದರು. ಇದಾದ ಬಳಿಕ ಸೂರಜ್ ಪಟ್ವಾ (18 ) ಕೂಡ ನೀರಿನಲ್ಲಿ ಮುಳುಗಡೆಯಾದನು. ಪಟ್ವಾ ಹಿರಿಯ ಸಹೋದರ (35) ಹಾಗೂ ತಾಯಿ ಮುನ್ನಿ ದೇವಿ(62) ಕೂಡ ಇವರನ್ನು ರಕ್ಷಿಸಲು ಹೋಗಿ ಜಲಸಮಾಧಿಯಾಗಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಯಮುನಾ ಪ್ರಸಾದ್ ಮಾಹಿತಿ ನೀಡಿದ್ರು.
ಈಜುಗಾರರ ಸಹಾಯದಿಂದ ಮುನ್ನಿ ದೇವಿ ಮೃತ ದೇಹವನ್ನು ಹೊರತೆಗೆಯಲಾಗಿದೆ. ಉಳಿದ ನಾಲ್ವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.