ಲಕ್ಷಾಂತರ ವಿದ್ಯಾರ್ಥಿಗಳಂತೆ ಉತ್ತರ ಪ್ರದೇಶದ ಪುಟ್ಟ ಹಳ್ಳಿಯೊಂದರ ನಿವಾಸಿ 18 ವರ್ಷದ ಮನು ಚೌಹಾಣ್ 12ನೇ ತರಗತಿ ಫಲಿತಾಂಶಕ್ಕೆ ಕಾತರದಿಂದ ಕಾಯುತ್ತಿದ್ದಾರೆ. ಆದರೆ ಅವರಿಗೆ ಫಲಿತಾಂಶದ ಬಗ್ಗೆ ಹೆಚ್ಚು ಚಿಂತೆಯಿಲ್ಲ. ಏಕೆಂದರೆ ಮನು ಚೌಹಾಣ್ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದಲ್ಲಿ 100 ಪ್ರತಿಶತ ವಿದ್ಯಾರ್ಥಿವೇತನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಅಕ್ರಬಾದ್ನ ಇನ್ಶೂರೆನ್ಸ್ ಸೇಲ್ಸ್ಮನ್ನ ಪುತ್ರನಾಗಿರುವ ಮನುಗೆ ಸ್ಟ್ಯಾನ್ಫೋರ್ಡ್ನಿಂದ ವಿದ್ಯಾರ್ಥಿವೇತನ ಪಡೆಯುವುದು ಅಷ್ಟೊಂದು ಸುಲಭದ ಕೆಲಸವಂತೂ ಆಗಿರಲಿಲ್ಲ. ಈತನ ಕನಸುಗಳನ್ನ ಬೆಂಬಲಿಸಲು ಪೋಷಕರ ಬಳಿ ಆರ್ಥಿಕ ಶಕ್ತಿ ಕೂಡ ಇರಲಿಲ್ಲ. ಆದರೂ ಸಹ ಈತ ತನ್ನ ಆಕಾಂಕ್ಷೆಗಳನ್ನ ಸಾಕಾರಗೊಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಮನು, ಸ್ಟ್ಯಾನ್ಫೋರ್ಡ್ನಲ್ಲಿ ಉತ್ತಮ ಸಂಶೋಧನಾ ಸೌಲಭ್ಯಗಳನ್ನ ಹೊಂದಿದೆ ಎಂಬ ಕಾರಣಕ್ಕೆ ನಾನು ಅರ್ಜಿ ಸಲ್ಲಿಕೆ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ದೀನದಲಿತ ಮಕ್ಕಳಿಗೆ ಶಿಕ್ಷಣಕ್ಕೆ ಅವಕಾಶ ಕಲ್ಪಿಸುವ ಅಭಿಲಾಷೆ ಹೊಂದಿದ್ದೇನೆ ಎಂದು ಹೇಳಿದ್ದಾರೆ.