ಸಿಕ್ಕಾಪಟ್ಟೆ ಕೋಲ್ಡ್ ಇರುವ ರೂಮಿನಲ್ಲಿ ಎರಡು ನವಜಾತ ಶಿಶುಗಳನ್ನು ಇರಿಸಿದ ಪರಿಣಾಮ ಎರಡೂ ಮಕ್ಕಳು ಸಾವನ್ನಪ್ಪಿದ ಘಟನೆಯು ಉತ್ತರ ಪ್ರದೇಶದ ಶಾಮ್ಲಿಯ ಖಾಸಗಿ ಕ್ಲಿನಿಕ್ನಲ್ಲಿ ಸಂಭವಿಸಿದೆ.
ಈ ಸಂಬಂಧ ಆಸ್ಪತ್ರೆ ಸಿಬ್ಬಂದಿ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕ್ಲಿನಿಕ್ ಮಾಲೀಕರು ಕೂಡ ಆಗಿರುವ ಡಾ. ನೀತು ಎಂಬವರು ಚೆನ್ನಾಗಿ ನಿದ್ದೆ ಮಾಡಬೇಕು ಎಂಬ ಕಾರಣಕ್ಕೆ ಶನಿವಾರದಂದು ಎಸಿಯನ್ನು ಆನ್ ಮಾಡಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಭಾನುವಾರ ಶಿಶುಗಳು ಶವದ ರೂಪದಲ್ಲಿ ಪತ್ತೆಯಾಗಿವೆ ಎಂದು ತಿಳಿದು ಬಂದಿದೆ. ಮಕ್ಕಳ ಕುಟುಂಬಸ್ಥರು ನೀಡಿರುವ ದೂರಿನ ಆಧಾರದ ಮೇಲೆ ವೈದ್ಯೆ ನೀತು ವಿರುದ್ಧ ಸೆಕ್ಷನ್ 304 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಹೆಚ್ಓ ನೇತ್ರಪಾಲ ಸಿಂಗ್ ಹೇಳಿದ್ದಾರೆ.
ಆರೋಪಿ ನೀತುರನ್ನು ಬಂಧಿಸಲಾಗಿದೆ ಎಂದು ಎಸ್ಹೆಚ್ಓ ತಿಳಿಸಿದ್ದಾರೆ. ಈ ನಡುವೆ ಘಟನೆ ಬಗ್ಗೆ ಆರೋಗ್ಯ ಇಲಾಖೆ ತನಿಖೆಗೆ ಆದೇಶಿಸಿದೆ. ಈ ಪ್ರಕರಣ ಸಂಬಂಧ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತೆ ಅಂತಾ ಹೆಚ್ಚುವರಿ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಅಶ್ವನಿ ಶರ್ಮಾ ಹೇಳಿದ್ದಾರೆ.