ಐದು ವರ್ಷದ ಶಾಲಾ ಬಾಲಕನನ್ನು ತರಗತಿಯಲ್ಲೇ ಬಿಟ್ಟು ಬಾಗಿಲು ಹಾಕಿ ಶಿಕ್ಷಕರು ಮನೆಗೆ ತೆರಳಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬಲ್ಲಿಯಾ ಜಲ್ಲೆಯಲ್ಲಿ ವರದಿ ಆಗಿದೆ. ಬಾಲಕ ಶಾಲೆಯಲ್ಲಿಯೇ ಉಳಿದಿದ್ದಾನೆ ಎಂಬುದು ಶಾಲಾ ಸಿಬ್ಬಂದಿ ಗಮನಕ್ಕೆ ಬಾರದೇ ಇದ್ದುದೇ ಈ ಘಟನೆಗೆ ಕಾರಣ ಎನ್ನಲಾಗಿದೆ.
ಆದಿತ್ಯ ಎಂಬ ಹೆಸರಿನ ಬಾಲಕನನ್ನು ಆತನ ಪೋಷಕರು ಶಾಲೆಗೆ ತೆರಳಿ ಕೊಠಡಿಯ ಬಾಗಿಲು ಒಡೆಯುವ ಮೂಲಕ ರಕ್ಷಣೆ ಮಾಡಿದ್ದಾರೆ. ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಶಾಲಾ ಸಿಬ್ಬಂದಿ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ.
ವಿಡಿಯೋದಲ್ಲಿ ತರಗತಿಯ ಒಳಗೆ ಸಿಲುಕಿದ ಮಗು ಸಹಾಯಕ್ಕಾಗಿ ಅಳುತ್ತಿರೋದನ್ನು ಕಾಣಬಹುದಾಗಿದೆ. ಗುರುವಾರ ಮಧ್ಯಾಹ್ನವಾದರೂ ಮಗು ಮನೆಗೆ ಬಾರದುದ್ದನ್ನು ಗಮನಿಸಿದ ಪೋಷಕರು ಮಗುವಿಗಾಗಿ ಹುಡುಕಾಟ ನಡೆಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಮಗು ತರಗತಿಯೊಳಗೆ ಮಲಗಿದ್ದ. ಇದನ್ನು ಗಮನಿಸದ ಶಾಲಾ ಸಿಬ್ಬಂದಿ ಕೊಠಡಿಗೆ ಬಾಗಿಲು ಹಾಕಿ ಮನೆಗೆ ತೆರಳುವ ಮೂಲಕ ನಿರ್ಲಕ್ಷ್ಯ ತೋರಿದ್ದಾರೆ ಎನ್ನಲಾಗಿದೆ.