ಉತ್ತರಪ್ರದೇಶದಲ್ಲಿ ಎರಡನೇ ಹಂತದ ಮತದಾನ ರಂಗೇರಿತ್ತು. ಬಿಜೆಪಿ ಮತ್ತು ಸಮಾಜವಾದಿ ಪಕ್ಷ ಗಳ ನಡುವೆ ನೇರ ಹಣಾಹಣಿ ಇದ್ದರೂ ಕೂಡ ಕಾಂಗ್ರೆಸ್‌ನಿಂದ ಪ್ರಿಯಾಂಕಾ ವಾದ್ರಾ ಮಾತ್ರವೇ ನೇರವಾಗಿ ಕಣದಲ್ಲಿ ಧುಮುಕಿ ಪ್ರಚಾರದ ಜತೆಗೆ ರಣತಂತ್ರ ಹೆಣೆದಿದ್ದಾರೆ. ಉಳಿದಂತೆ ಮಾಯಾವತಿ ನೇತೃತ್ವದ ಬಿಎಸ್‌ಪಿ ಈ ಬಾರಿ ಬಹುತೇಕ ಸದ್ದೇ ಮಾಡದೇ ಶಾಂತಿಯಿಂದಿದೆ.
ಮುಸ್ಲಿಮರ ಬಾಹುಳ್ಯದ ಸುಮಾರು 55 ಕ್ಷೇತ್ರಗಳಲ್ಲಿ 2ನೇ ಹಂತದ ವಿಧಾನಸಭಾ ಚುನಾವಣೆಗೆ ಮತದಾನವು ಶುಕ್ರವಾರ ನಡೆದಿದೆ. ಸುಮಾರು 62% ಪ್ರಮಾಣದಷ್ಟು ಮತದಾನ ನಡೆದಿದೆ.
ಈ ನಡುವೆ ಸಹರನ್ಪುರದಲ್ಲಿ ಮತ ಚಲಾವಣೆಗೆ ವೃದ್ಧೆಯೊಬ್ಬರು ಆಸ್ಪತ್ರೆಯಿಂದ ನೇರವಾಗಿ ಆಂಬುಲೆನ್ಸ್‌ನಲ್ಲಿ ಮತಗಟ್ಟೆಗೆ ಬಂದಿದ್ದಾರೆ. ಸತ್ಯಯುಗ ಆಶ್ರಮ ಇಂಟರ್ ಕಾಲೇಜಿನ ಮತಗಟ್ಟೆಯಲ್ಲಿ ಈ ಘಟನೆ ನಡೆದಿದೆ.
ಕಣ್ಣಂಚನ್ನು ತೇವಗೊಳಿಸುತ್ತೆ 70 ರ ವೃದ್ದೆ ಸಂಕಷ್ಟದ ವಿಡಿಯೋ
ಬಿಜೆಪಿ ಕಾರ್ಪೋರೇಟರ್ ಪುನೀತ್ ಚೌಹಾಣ್ ಅವರ ತಾಯಿ ನಾರೀಶ್ ಚೌಹಾಣ್ ಅವರೇ ಆಂಬುಲೆನ್ಸ್‌ನಲ್ಲಿ ಬಂದು ಸ್ಟ್ರೆಚರ್‌ನಲ್ಲಿ ಮತಗಟ್ಟೆಗೆ ಸಾಗಿ, ತಮ್ಮ ಹಕ್ಕು ಚಲಾಯಿಸಿದವರು. ಬಳಿಕ ಪುನಃ ಆಂಬುಲೆನ್ಸ್‌ನಲ್ಲೇ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಮುಂದುವರಿಸಿದ್ದಾರೆ.
ಚೌಹಾಣ್ ಅವರ ತಾಯಿಗೆ ತಮ್ಮ ಹಕ್ಕು ಕಳೆದುಕೊಳ್ಳಬಾರದು ಎಂಬ ಉತ್ಕಟ ಇಚ್ಛೆ ಇತ್ತಂತೆ. ಹಾಗಾಗಿ ಅವರು ಅದನ್ನು ವೈದ್ಯರಿಗೆ ಮತ್ತು ಮಗನಿಗೆ ತಿಳಿಸಿ ಸೂಕ್ತ ವ್ಯವಸ್ಥೆ ಮಾಡಿಸಿಕೊಂಡು ಪೂರೈಸಿಕೊಂಡಿದ್ದಾರೆ.