ಲಖನೌ: ನಡುರಾತ್ರಿಯಲ್ಲಿ ಅಂಗಡಿಯೊಂದರ ಎದುರು ಬಂದ ಪೊಲೀಸ್ ಇನ್ಸ್ಪೆಕ್ಟರ್ ಅಲ್ಲಿದ್ದ ಎಲ್ಇಡಿ ಬಲ್ಬ್ ಕದ್ದು ಪರಾರಿಯಾಗಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆದಿದೆ. ರಾಜೇಶ್ ವರ್ಮ ಎಂಬ ಇನ್ಸ್ಪೆಕ್ಟರ್ ಈ ಕೃತ್ಯ ಎಸಗಿದ್ದು, ಅಂಗಡಿ ಎದುರಿಗಿದ್ದ ಸಿಸಿ ಟಿವಿಯಿಂದಾಗಿ ಘಟನೆ ಬೆಳಕಿಗೆ ಬಂದಿದೆ.
ಸಿಸಿ ಟಿವಿಯಲ್ಲಿ ಸೆರೆಯಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ಇನ್ಸ್ಪೆಕ್ಟರ್ ರಾಜೇಶ್ ಅವರನ್ನು ಅಮಾನತು ಮಾಡಲಾಗಿದೆ.
ಇಲ್ಲಿನ ಫುಲ್ಪುರ್ ಕೋತ್ವಾಲಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ರಾಜೇಶ್ ಅವರು ದಸರಾದ ನಿಮಿತ್ತ ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಸಮೀಪದ ಪಾನ್ ಅಂಗಡಿ ಎದುರಿಗೆ ಹೋಗಿದ್ದಾರೆ.
ಅಲ್ಲಿದ್ದ ಎಲ್ಇಡಿ ಬಲ್ಬ್ ಅವರ ಕಣ್ಣಿಗೆ ಬಿದ್ದಿದೆ. ತಮ್ಮನ್ನು ಯಾರಾದರೂ ಗಮನಿಸುತ್ತಿದ್ದಾರೆಯೇ ಎಂದು ಆಸುಪಾಸು ನೋಡಿದ್ದಾರೆ. ಸುತ್ತಲೂ ಯಾರೂ ಇಲ್ಲದ್ದನ್ನು ದೃಢಪಡಿಸಿಕೊಂಡ ನಂತರ ಬಲ್ಬ್ ಅನ್ನು ಎಗರಿಸಿ ತಮ್ಮ ಜೇಬಿನೊಳಕ್ಕೆ ಹಾಕಿಕೊಂಡಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಮರುದಿನ ಬೆಳಗ್ಗೆ ಅಂಗಡಿ ಮಾಲೀಕ ಬಂದಾಗ ಬಲ್ಬ್ ಕಾಣಿಸಲಿಲ್ಲ. ನಂತರ ಅವರು ಸಿಸಿ ಟಿವಿ ಪರಿಶೀಲಿಸಿದಾಗ ಇನ್ಸ್ಪೆಕ್ಟರ್ ಮಾಡಿರುವ ಕೃತ್ಯ ತಿಳಿದುಬಂದಿದೆ. ಇದರ ವಿಡಿಯೋ ವೈರಲ್ ಆಗುತ್ತಲೇ ಅವರನ್ನು ಅಮಾನತು ಮಾಡಲಾಗಿದೆ.