ಗೊಂಡಾ: ದೇಶದ ಬಹುತೇಕ ರಾಜ್ಯಗಳಲ್ಲಿ ಅತಿವೃಷ್ಠಿಯಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ಭಾರೀ ಮಳೆ, ಪ್ರವಾಹದಿಂದಾಗಿ ಜನ ಕಂಗಾಲಾಗಿದ್ದು, ಇದೇ ವೇಳೆ ಅನೇಕ ರಾಜ್ಯಗಳಲ್ಲಿ ಮಳೆ ಕೊರತೆ ಕಂಡು ಬಂದಿದೆ. ರೈತರು ಮಳೆಗಾಗಿ ಪ್ರಾರ್ಥಿಸಿದ್ದಾರೆ.
ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ರೈತರೊಬ್ಬರು ಮಳೆಯ ದೇವರು ಇಂದ್ರನ ವಿರುದ್ಧ ಲಿಖಿತ ದೂರು ಸಲ್ಲಿಸಿದ್ದು, ಮಳೆ ಕೊರತೆ ಕಾರಣ ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ ವಿಲಕ್ಷಣ ಘಟನೆ ನಡೆದಿದೆ.
ಜಿಲ್ಲೆಯ ಝಾಲಾ ಗ್ರಾಮದ ನಿವಾಸಿ ಸುಮಿತ್ ಕುಮಾರ್ ಯಾದವ್ ಎಂದು ಗುರುತಿಸಲಾದ ರೈತ ದೂರು ಪರಿಹಾರ ದಿನದ ಸಂದರ್ಭದಲ್ಲಿ ವಿಚಿತ್ರ ದೂರನ್ನು ಸಲ್ಲಿಸಿದ್ದಾರೆ. ಗೊಂಡಾ ಜಿಲ್ಲೆಯಲ್ಲಿ ಶನಿವಾರ ಸಂಪೂರ್ಣ ಸಮಾಧಾನ್ ದಿವಸ್ – ಸಂಪೂರ್ಣ ಪರಿಹಾರ ದಿನ ಆಚರಿಸಲಾಯಿತು.
ಜಿಲ್ಲೆಯಲ್ಲಿ ಕಡಿಮೆ ಮಳೆಯಾಗಿರುವುದರಿಂದ ಜನಜೀವನದ ಮೇಲೆ ದುಷ್ಪರಿಣಾಮ ಬೀರಿದೆ ಎಂದು ದೂರಿನಲ್ಲಿ ಯಾದವ್ ಹೇಳಿದ್ದಾರೆ. ಈ ಪ್ರದೇಶದಲ್ಲಿನ ಮಳೆ ಅಭಾವ ಮತ್ತು ಅನಾವೃಷ್ಟಿಯ ಬಗ್ಗೆ ಭಗವಾನ್ ಇಂದ್ರನನ್ನು ದೂಷಿಸಿದ ಸುಮಿತ್ ಕುಮಾರ್ ಯಾದವ್, ಬರಗಾಲದಿಂದ ಬಹಳ ತೊಂದರೆಯಾಗಿದೆ. ಪ್ರಾಣಿಗಳು ಮತ್ತು ಕೃಷಿಯ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಉಂಟುಮಾಡಿದೆ. ಇದರಿಂದ ಮಹಿಳೆಯರು ಮತ್ತು ಮಕ್ಕಳು ತುಂಬಾ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಈ ಪ್ರಕರಣದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಇಂದ್ರದೇವನ ವಿರುದ್ಧ ದೂರು ನೀಡಿದ್ದಾರೆ.
ಕಂದಾಯ ಅಧಿಕಾರಿ ಎನ್.ಎನ್. ವರ್ಮಾ, ದೂರು ಪತ್ರದ ಮೇಲೆ ಮಳೆ ದೇವರು ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ ಎಂದು ಬರೆದಿದ್ದಾರೆ. ಮೇಲ್ನೋಟಕ್ಕೆ, ಅವರು ಈ ಪತ್ರವನ್ನು ಓದದೆಯೇ ಮುಂದಿನ ಕ್ರಮಕ್ಕಾಗಿ ಡಿಎಂ ಕಚೇರಿಗೆ ರವಾನಿಸಿದ್ದಾರೆ.
ಪತ್ರ ವೈರಲ್ ಆದಾಗ, ವರ್ಮಾ ಅದನ್ನು ಫಾರ್ವರ್ಡ್ ಮಾಡಿಲ್ಲ ಎಂದು ಅವರು ತಿಳಿಸಿದರು. ನನಗೆ ಅಂತಹ ಯಾವುದೇ ವಿಷಯ ಬಂದಿಲ್ಲ, ಆ ದೂರು ಪತ್ರದಲ್ಲಿ ಕಂಡುಬರುವ ಮುದ್ರೆಯು ನಕಲಿ ಸೀಲ್ ಆಗಿದೆ. ಸಂಪೂರ್ಣ ಸಮಾಧಾನ್ ದಿವಸ್ ನಲ್ಲಿ ಬಂದ ದೂರುಗಳನ್ನು ಆಯಾ ಇಲಾಖೆಗಳಿಗೆ ನಾಮನಿರ್ದೇಶನ ಮಾಡಲಾಗುತ್ತದೆ. ಈ ದೂರುಗಳನ್ನು ಬೇರೆ ಯಾವುದೇ ಕಚೇರಿಗಳಿಗೆ ರವಾನಿಸಿಲ್ಲ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಆದಾಗ್ಯೂ, ಪತ್ರದಲ್ಲಿ ಅವರ ಸಹಿ ಇದ್ದು, ‘ಮುಂದಿನ ಕ್ರಮಕ್ಕಾಗಿ ಫಾರ್ವರ್ಡ್ ಮಾಡಲಾಗಿದೆ’ ಎಂದು ಬರೆಯಲಾಗಿದೆ.