ಇತ್ತೀಚಿನ ದಿನಗಳಲ್ಲಿ ಪೊಲೀಸರೆಂದರೆ ದರ್ಪ ತೋರುವವರು ಎಂಬ ಮಾತುಗಳು ಕ್ರಮೇಣ ಜನರ ಮನಃಪಟಲದಿಂದ ದೂರವಾಗುತ್ತಿವೆ. ಏಕೆಂದರೆ, ಈ ಪೊಲೀಸರು ತಮ್ಮಲ್ಲೂ ಮಾನವೀಯತೆ ಇದೆ ಎಂಬುದನ್ನು ಜನಸಾಮಾನ್ಯರಿಗೆ ತೋರಿಸುತ್ತಲೇ ಬಂದಿದ್ದಾರೆ.
ಪೊಲೀಸರ ಇಂತಹ ಮಾನವೀಯ ಗುಣಕ್ಕೆ ತಾಜಾ ನಿದರ್ಶನವೆಂದರೆ ಉತ್ತರ ಪ್ರದೇಶದ ಪೊಲೀಸರು ತಳ್ಳುವ ಗಾಡಿಯವನಿಗೆ ನೆರವಾಗಿರುವುದು.
ಉತ್ತರ ಪ್ರದೇಶದ ಮಹೋಬಾದಲ್ಲಿ ರಸ್ತೆಯಲ್ಲಿ ತಳ್ಳುವ ಗಾಡಿಯ ವೃದ್ಧನೊಬ್ಬ ಗಾಡಿ ತುಂಬಾ ಸರಕನ್ನು ಹಾಕಿ ತಳ್ಳುತ್ತಾ ಹೋಗುತ್ತಿರುತ್ತಾನೆ. ಆಗ ನಿಯಂತ್ರಣ ತಪ್ಪಿ ಗಾಡಿ ಒಂದು ಕಡೆ ವಾಲಿ ಅದರಲ್ಲಿದ್ದ ಸರಕು ಕೆಳಗೆ ಬಿದ್ದಿದೆ.
ಈ ಸರಕಿನ ಬಂಡಲ್ ಗಳನ್ನು ಮತ್ತೆ ಗಾಡಿಗೆ ತುಂಬಿಸಲು ಆತ ಹರಸಾಹಸಪಡುತ್ತಿರುತ್ತಾನೆ. ಇದನ್ನು ಗಮನಿಸಿದ ರವಿಕುಮಾರ್ ಸಿಂಗ್ ಮತ್ತು ಇನ್ನೋರ್ವ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಬಂದು ಬಂಡಲ್ ಗಳನ್ನು ಗಾಡಿಗೆ ತುಂಬಿಸಿ ಅನತಿ ದೂರದವರೆಗೆ ಗಾಡಿಯನ್ನು ತಳ್ಳಿ ಸಹಾಯ ಮಾಡಿದ್ದಾರೆ.
ಈ ನೆರವಿನ ಹಸ್ತ ಚಾಚಿದ ಸಣ್ಣ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಪೊಲೀಸರ ನೆರವನ್ನು ಕಂಡ ನೆಟ್ಟಿಗರು ಶಹಬ್ಬಾಸ್ ಎಂದಿದ್ದಾರೆ. ಇಂತಹ ಮಾನವೀಯ ಮೌಲ್ಯಗಳು ಎಲ್ಲರಲ್ಲಿಯೂ ಬರಲಿ. ಕಷ್ಟದಲ್ಲಿರುವವರಿಗೆ ನೆರವಾದರೆ ಅದಕ್ಕಿಂತ ನಾಗರಿಕ ಕರ್ತವ್ಯ ಮತ್ತೊಂದಿಲ್ಲ ಎಂದು ನೆಟ್ಟಿಗರು ಹೇಳಿದ್ದಾರೆ.