alex Certify ಉತ್ತರ ಪ್ರದೇಶ ಚುನಾವಣೆ: ಮೊದಲ ಹಂತದಲ್ಲಿ ಚುರುಕಿನ ಮತದಾನ, 623 ಅಭ್ಯರ್ಥಿಗಳು ಕಣದಲ್ಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉತ್ತರ ಪ್ರದೇಶ ಚುನಾವಣೆ: ಮೊದಲ ಹಂತದಲ್ಲಿ ಚುರುಕಿನ ಮತದಾನ, 623 ಅಭ್ಯರ್ಥಿಗಳು ಕಣದಲ್ಲಿ

ನವದೆಹಲಿ: ಉತ್ತರ ಪ್ರದೇಶ ಚುನಾವಣೆಯ ಮೊದಲ ಹಂತದ ಮತದಾನ ರಾಜ್ಯದ 11 ಜಿಲ್ಲೆಗಳನ್ನು ಒಳಗೊಂಡ 58 ವಿಧಾನಸಭಾ ಸ್ಥಾನಗಳಿಗೆ ಗುರುವಾರ(ಫೆಬ್ರವರಿ 10, 2022) ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗಿದ್ದು, ಇಂದು ಸಂಜೆ 6 ಗಂಟೆಗೆ ಮತದಾನ ಮುಕ್ತಾಯವಾಗಲಿದೆ.

ಮೊದಲ ಹಂತದಲ್ಲಿ 623 ಅಭ್ಯರ್ಥಿಗಳು ಕಣದಲ್ಲಿದ್ದು, ಈ ಹಂತದಲ್ಲಿ ಸುಮಾರು 2.27 ಕೋಟಿ ಜನರು ಮತ ಚಲಾಯಿಸಲು ಅರ್ಹರಾಗಿದ್ದಾರೆ.

ಉತ್ತರ ಪ್ರದೇಶದಲ್ಲಿ, ಮೊದಲ ಹಂತದಲ್ಲಿ ಪಶ್ಚಿಮ ಯುಪಿ ಮತ್ತು ರಾಜ್ಯದ ದೋಬ್ ಪ್ರದೇಶಗಳಲ್ಲಿ ಮತದಾನ ನಡೆಯಲಿದೆ.

ಮಥುರಾ, ಮುಜಾಫರ್‌ನಗರ, ಮೀರತ್, ಘಾಜಿಯಾಬಾದ್, ಬುಲಂದ್‌ಶಹರ್, ಹಾಪುರ್, ಶಾಮ್ಲಿ, ಬಾಗ್‌ಪತ್, ಅಲಿಗಢ್, ಆಗ್ರಾ ಮತ್ತು ಗೌತಮ್ ಬುದ್ಧ ನಗರಗಳಲ್ಲಿ ಇಂದು ಮತದಾನ ನಡೆಯುತ್ತಿದೆ.

ಮೊದಲ ಹಂತದ ಚುನಾವಣಾ ಪ್ರಚಾರ ಮಂಗಳವಾರ ಸಂಜೆ ಅಂತ್ಯಗೊಂಡಿದ್ದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪಶ್ಚಿಮ ಉತ್ತರ ಪ್ರದೇಶದ ವಿವಿಧ ಸ್ಥಳಗಳಲ್ಲಿ ಕೇಂದ್ರೀಯ ಅರೆಸೇನಾ ಪಡೆಗಳ 412 ಕಂಪನಿಗಳ ಸುಮಾರು 50,000 ಅರೆಸೈನಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಮತದಾನ ನಡೆಯುತ್ತಿರುವ 58 ವಿಧಾನಸಭಾ ಕ್ಷೇತ್ರಗಳಲ್ಲಿ ಶಾಂತಿ ಕಾಪಾಡಲು ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ರಾಜ್ಯದ ಗಡಿಯನ್ನು ಪೊಲೀಸರು ಮುಚ್ಚಿದ್ದಾರೆ.

ಮೊದಲ ಹಂತದ ಚುನಾವಣೆಯಲ್ಲಿ ಗಮನ ಸೆಳೆದಿರುವ ಕ್ಷೇತ್ರಗಳು ಮತ್ತು ಈ ವರ್ಷದ ಚುನಾವಣಾ ಪ್ರಚಾರದುದ್ದಕ್ಕೂ ವಿಶೇಷವಾಗಿ ರಾಜಕೀಯ ಬಿಸಿಯನ್ನು ಹೆಚ್ಚಿಸಿದ ಕ್ಷೇತ್ರಗಳು ಎಂದರೆ ನೋಯ್ಡಾ, ಕೈರಾನಾ ಮತ್ತು ಮೀರತ್ ಗಳಾಗಿವೆ.

ನೋಯ್ಡಾ ವಿಧಾನಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷ(ಬಿಜೆಪಿ) ಮತ್ತೊಮ್ಮೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಪುತ್ರ ಪಂಕಜ್ ಸಿಂಗ್ ಅವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ಪಂಖೂರಿ ಪಾಠಕ್ ಅವರನ್ನು ಕಣಕ್ಕಿಳಿಸಿದೆ, ಅವರ ಪರವಾಗಿ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಮನೆ-ಮನೆ ಪ್ರಚಾರ ನಡೆಸಿದ್ದರು. ಬಹುಜನ ಸಮಾಜ ಪಕ್ಷ(ಬಿಎಸ್‌ಪಿ) ಈ ಕ್ಷೇತ್ರದಲ್ಲಿ ಕೃಪಾರಾಮ್ ಶರ್ಮಾ ಅವರನ್ನು ಕಣಕ್ಕಿಳಿಸಿದೆ. ಸಮಾಜವಾದಿ ಪಕ್ಷದ(ಎಸ್‌ಪಿ) ಸುನೀಲ್ ಚೌಧರಿ ಸಹ ಅಭ್ಯರ್ಥಿಯಾಗಿದ್ದಾರೆ.

ಎಸ್ಪಿ ನಾಯಕ ರಫೀಕ್ ಅನ್ಸಾರಿ ಅವರ ‘ಹಿಂದೂಗಾರ್ಡಿ’ ಹೇಳಿಕೆಯ ವಿಡಿಯೊದಲ್ಲಿ ನಂತರ ಮೀರತ್ ವಿಧಾನಸಭಾ ಕ್ಷೇತ್ರವು ಚರ್ಚೆಯ ವಿಷಯವಾಗಿದೆ. ಇವರ ವಿರುದ್ಧ ಬಿಜೆಪಿ ಕಮಲ್ ದತ್ ಶರ್ಮಾ ಅವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್‌ನ ರಂಜನ್ ಶರ್ಮಾ ಮತ್ತು ಬಿಎಸ್‌ಪಿಯ ಮೊಹಮ್ಮದ್ ದಿಲ್ಶಾದ್ ಕೂಡ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ಕೈರಾನಾ ವಿಧಾನಸಭಾ ಕ್ಷೇತ್ರವು ಹಿಂದೂಗಳ ವಲಸೆಗಾಗಿ ಸುದ್ದಿಯಲ್ಲಿದೆ. ಇದನ್ನು ಬಿಜೆಪಿ ತನ್ನ ಪ್ರಚಾರದಲ್ಲಿ ಹೈಲೈಟ್ ಮಾಡಿದೆ. ಎಸ್ಪಿ ನಹಿದ್ ಹಾಸನ್ ಅವರನ್ನು ಕಣಕ್ಕಿಳಿಸಿದ್ದು, ಅವರ ವಿರುದ್ಧ ಬಿಜೆಪಿಯಿಂದ ಮೃಗಾಂಕಾ ಸಿಂಗ್ ಕಣಕ್ಕಿಳಿದಿದ್ದಾರೆ.

ಆಗ್ರಾ ಗ್ರಾಮಾಂತರ(ಎಸ್‌ಸಿ) ಸ್ಥಾನಕ್ಕೆ ಎಸ್‌.ಪಿ. ನಾಯಕ ಮಹೇಶ್ ಕುಮಾರ್ ಜಾಥವ್ ಅವರು ಉತ್ತರಾಖಂಡದ ಮಾಜಿ ರಾಜ್ಯಪಾಲರಾದ ಮತ್ತು ಬಿಜೆಪಿ ನಾಯಕಿ ಬೇಬಿ ರಾಣಿ ಮೌರ್ಯ ವಿರುದ್ಧ ಸ್ಪರ್ಧಿಸಲಿದ್ದಾರೆ. ಕಾಂಗ್ರೆಸ್‌ ನಿಂದ ಉಪೇಂದ್ರ ಸಿಂಗ್ ಮತ್ತು ಬಿಎಸ್‌ಪಿಯಿಂದ ಕಿರಣ್ ಪ್ರಭಾ ಕೇಸರಿ ಕೂಡ ಇಲ್ಲಿ ಕಣದಲ್ಲಿದ್ದಾರೆ.

403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭೆಗೆ ಫೆಬ್ರವರಿ 10, 14, 20, 23, 27, ಮಾರ್ಚ್ 3, ಮತ್ತು 7 ರಂದು 7 ಹಂತಗಳಲ್ಲಿ ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...