ಯುಕೆ: ಆಸ್ಪತ್ರೆಗಳಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳೆಂದರೆ ದೇವರೆಂದೇ ಭಾವಿಸುತ್ತಾರೆ. ಆದರೆ ಇಲ್ಲೋರ್ವ ನರ್ಸ್, ಸೀರಿಯಲ್ ಕಿಲ್ಲರ್ ಆಗಿ ಬದಲಾಗಿದ್ದು, ನವಜಾತ ಶಿಶುಗಳನ್ನು ಸಾಯಿಸುತ್ತಿದ್ದ ಪ್ರಕರಣ ಯುಕೆಯಲ್ಲಿ ನಡೆದಿದೆ.
ಆಸ್ಪತ್ರೆಗೆ ದಾಖಲಾಗಿದ್ದ 7 ಮಕ್ಕಳನ್ನು ಸಾಯಿಸಿರುವ ನರ್ಸ್ ಲೂಯಿ ಲೆಟ್ಟಿ (33), ಇನ್ನೂ 6 ಶಿಶುಗಳ ಹತ್ಯೆ ಪ್ಲಾನ್ ರೂಪಿಸಿದ್ದಳಂತೆ. ಸಧ್ಯ ನರ್ಸ್ ಳನ್ನು ಬಂಧಿಸಲಾಗಿದ್ದು, ಆಕೆ ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ. ಆದರೆ ಶಿಕ್ಷೆ ಪ್ರಕಟವಾಗಿಲ್ಲ, ಆಗಸ್ಟ್ 21ರಂದು ಮ್ಯಾಂಚೆಸ್ಟರ್ ನ್ಯಾಯಾಲಯ ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ.
2015 ಜೂನ್ ಹಾಗೂ 2016 ನಡುವೆ ವಾಯುವ್ಯ ಇಂಗ್ಲೆಂಡ್ ನ ಕೌಂಟೆಸ್ ಆಫ್ ಚೆಸ್ಟರ್ ಆಸ್ಪತ್ರೆಯಲ್ಲಿ ಈ ಹತ್ಯೆ ನಡೆದಿದೆ. 2018 ಹಾಗೂ ಮತ್ತು 2023ರ ನಡುವೆ ನರ್ಸ್ ನ್ನು ಮೂರು ಬಾರಿ ಬಂಧಿಸಲಾಗಿತ್ತು. ಜಾಮೀನಿನ ಮೇಲೆ ಎರಡು ಬಾರಿಯೂ ಬಿಡುಗಡೆಗೊಂಡಿದ್ದಳು.
ದುರ್ಬಲ ಮಕ್ಕಳ ಆರೈಕೆ ಮಾಡಲು ಈ ನರ್ಸ್ ನೇಮಕ ಮಾಡಲಾಗಿತ್ತು. ನರ್ಸ್ ಹೇಳುವ ಪ್ರಕಾರ ಮಕ್ಕಳು ಸಹಜವಾಗಿ ಸಾವನ್ನಪ್ಪಿವೆ. ನಾನೇನೂ ಮಾಡಿಲ್ಲ ಎಂದು ಹೇಳುತ್ತಾಳೆ. ಆದರೆ ಆಕೆಯ ಮನೆಯಲ್ಲಿ ಸಿಕ್ಕ ಪತ್ರದಲ್ಲಿ ತಾನು ದುಷ್ಟೆ. ನಾನೇ ಎಲ್ಲಾ ತಪ್ಪನ್ನು ಮಾಡಿದ್ದೇನೆ ಎಂದು ಬರೆದಿಟ್ಟಿದ್ದಾಳೆ.