ಲಂಡನ್: ಅಪರಾಧದ ವಿರುದ್ಧ ಹೋರಾಡಲು ಇಂಗ್ಲೆಂಡ್ ಪೊಲೀಸರು ಹೊಸದೊಂದು ಅಸ್ತ್ರವನ್ನು ಕಂಡುಹಿಡಿದಿದ್ದಾರೆ. ಪೊಲೀಸ್ ಪಡೆಗಳು ಗಸ್ತು ತಿರುಗಲು ಶಕ್ತಿಯುತವಾದ ತುಕ್-ತುಕ್ ಅಕಾ ಆಟೋ-ರಿಕ್ಷಾಗಳನ್ನು ಬಳಸುಲು ಆರಂಭಿಸಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ತ್ರಿಚಕ್ರ ವಾಹನದ ಬಳಕೆ ನ್ಯೂಪೋರ್ಟ್ ಮತ್ತು ಮೊನ್‌ಮೌತ್‌ಶೈರ್‌ನ ಅಬರ್ಗವೆನ್ನಲ್ಲಿ ಆರಂಭಿಸಲಾಗಿದೆ. ಇದು ಎಲೆಕ್ಟ್ರಿಕಲ್ ಆಟೋ ಆಗಿದೆ. ಬಿಬಿಸಿ ವರದಿಯ ಪ್ರಕಾರ, ಅಧಿಕಾರಿಗಳು ಹೊಸದಾಗಿ ಪರಿಚಯಿಸಲಾದ ವಾಹನವನ್ನು ಗಸ್ತು ತಿರುಗಲು ಮತ್ತು ಪಾರ್ಕಿಂಗ್ ಮಾಡಲು ಬಳಸುತ್ತಿದ್ದಾರೆ.
ಆ ಆಟೋರಿಕ್ಷಾ ಗಂಟೆಗೆ ಸುಮಾರು 55 ಕಿಲೋಮೀಟರ್ ಚಲಿಸಬಲ್ಲುದು. ಇದರಿಂದಾಗಿ ಎಲ್ಲಿಯೇ ಅವಘಡಗಳು ನಡೆದರೂ ಅತಿ ಶೀಘ್ರದಲ್ಲಿ ಆ ಸ್ಥಳವನ್ನು ಮುಟ್ಟಿ ಸೂಕ್ತ ಕ್ರಮ ತೆಗೆದುಕೊಳ್ಳಲು ಅನುಕೂಲ ಆಗುತ್ತಿದೆ. ಮಾತ್ರವಲ್ಲದೇ ರಾತ್ರಿಯ ವೇಳೆಯಲ್ಲಿ ಮಹಿಳೆಯರು ಸುರಕ್ಷಿತವಾಗಿ ತಿರುಗಾಡಲು ಹಾಗೂ ಅಪರಾಧ ಕೃತ್ಯಗಳನ್ನು ತಡೆಗಟ್ಟಲು ಈ ಆಟೋ ನೆರವಾಗಬಲ್ಲುದು ಎಂದು ಪೊಲೀಸರು ಹೇಳಿದ್ದಾರೆ.