ಊಬರ್ನಲ್ಲಿ ಕ್ಯಾಬ್ ಬುಕ್ ಮಾಡುವ ಪ್ರಕ್ರಿಯೆ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಆದರೆ ಇದೀಗ ಮೆಟಾ ಮಾಲೀಕತ್ವದ ವಾಟ್ಸಾಪ್ ಮೂಲಕವೂ ನೀವು ಕ್ಯಾಬ್ ಬುಕ್ ಮಾಡುವ ಹೊಸದೊಂದು ವೈಶಿಷ್ಟ್ಯ ಜಾರಿಗೆ ದೇಶದಲ್ಲಿ ಶೀಘ್ರದಲ್ಲೇ ಜಾರಿಗೆ ಬರಲಿದೆ ಎನ್ನಲಾಗಿದೆ.
ಊಬರ್ ಟೆಕ್ನಾಲಜಿ ಹಾಗೂ ಮೆಟಾ ಫ್ಲಾಟ್ಫಾರಂ ಸಹಭಾಗಿತ್ವದಲ್ಲಿ ವಾಟ್ಸಾಪ್ ಚಾಟ್ಬೋಟ್ಗೆ ಸಂದೇಶವನ್ನು ಕಳಿಸುವ ಊಬರ್ನ ಮೊಬಿಲಿಟಿ ಸೇವೆಯು ಆರಂಭಗೊಳ್ಳಲಿದೆ. ಪ್ರಾರಂಭಿಕ ಹಂತದಲ್ಲಿ ಲಕ್ನೋದಲ್ಲಿ ಈ ಸೇವೆ ಆರಂಭಗೊಳ್ಳಲಿದೆ. ಮುಂದಿನ ದಿನಗಳಲ್ಲಿ ದೇಶಾದ್ಯಂತ ಈ ಸೇವೆ ವಿಸ್ತರಣೆಗೊಳ್ಳಲಿದೆ ಎಂದು ಊಬರ್ ತಿಳಿಸಿದೆ.
ಜಿಯೋ ಮಾರ್ಟ್ನ ಜೊತೆಯಲ್ಲಿ ವಾಟ್ಸಾಪ್ ಸಹಭಾಗಿತ್ವ ಹೊಂದಿದ ಬೆನ್ನಲ್ಲೇ ಈ ಬೆಳವಣಿಗೆ ಕೂಡ ಬಹಿರಂಗವಾಗಿದೆ. ಈ ಮೂಲಕ ವಾಟ್ಸಾಪ್ ದೇಶದಲ್ಲಿ ತನ್ನ ಬಳಕೆದಾರರನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಅಂದಾಜಿಸಬಹುದಾಗಿದೆ. ಮೆಟಾ ಮಾಲೀಕತ್ವದ ವಾಟ್ಸಾಪ್ ಈಗಾಗಲೇ ಭಾರತದಲ್ಲಿ ಅರ್ಧ ಶತಕೋಟಿಗಿಂತಲೂ ಅಧಿಕ ಬಳಕೆದಾರರನ್ನು ಹೊಂದಿದೆ.
ಭಾರತೀಯರಿಗೆ ಊಬರ್ ಸೇವೆ ಇನ್ನಷ್ಟು ಸುಲಭವಾಗಿ ಕೈಗೆ ಸಿಗಬೇಕು ಎಂದು ನಾವು ಬಯಸುತ್ತೇವೆ. ಇದೇ ಕಾರಣಕ್ಕಾಗಿ ಅನುಕೂಲಕರ ವೇದಿಕೆಗಳಲ್ಲಿ ಊಬರ್ ಸೇವೆ ನೀಡುತ್ತಿದ್ದೇವೆ ಎಂದು ಊಬರ್ನ ಬ್ಯುಸಿನೆಸ್ ಡೆವಲಪ್ಮೆಂಟ್ ಹಿರಿಯ ನಿರ್ದೇಶಕಿ ನಂದಿನಿ ಮಾಹೇಶ್ವರಿ ಹೇಳಿದ್ದಾರೆ.
ಈ ಹೊಸ ಪ್ರಯತ್ನದಿಂದಾಗಿ ಜನತೆಗೆ ಇನ್ಮುಂದೆ ಊಬರ್ ಅಪ್ಲಿಕೇಶನ್ ಮೂಲಕವೇ ರೈಡ್ ಬುಕ್ ಮಾಡಬೇಕೆಂದು ಇರೋದಿಲ್ಲ. ವಾಟ್ಸಾಪ್ ಬಳಕೆದಾರರು ಕೂಡ ಊಬರ್ಗೆ ನೋಂದಣಿ ಮಾಡಿಕೊಂಡು ಸುಲಭವಾಗಿ ರೈಡ್ ಬುಕ್ ಮಾಡಬಹುದಾಗಿದೆ.