![](https://kannadadunia.com/wp-content/uploads/2022/04/classroom-school-empty-istock-1019879-16289766601650699580.png)
ಉತ್ತರ ಪ್ರದೇಶದಲ್ಲೊಂದು ಆಘಾತಕಾರಿ ಘಟನೆ ನಡೆದಿದೆ. ತಮಗೆ ಬೇರೆ ಜಿಲ್ಲೆಗೆ ವರ್ಗಾವಣೆಯಾಗಿದೆ ಎಂಬ ಕಾರಣಕ್ಕೆ ಇದನ್ನು ರದ್ದುಗೊಳಿಸಿಕೊಳ್ಳುವ ಸಲುವಾಗಿ ವಸತಿ ಶಾಲೆಯ ಇಬ್ಬರು ಶಿಕ್ಷಕಿಯರು 20 ಮಂದಿ ವಿದ್ಯಾರ್ಥಿನಿಯರನ್ನು ಒತ್ತೆಯಾಗಿರಿಸಿದ್ದು, ಬಳಿಕ ಅವರನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸಲಾಗಿದೆ.
ಘಟನೆಯ ವಿವರ: ಉತ್ತರ ಪ್ರದೇಶದ ಲಕೀಂಪುರ ಖೇರಿ ಜಿಲ್ಲೆಯ ಬೇಹ್ಜಾನ್ ನಲ್ಲಿನ ಕಸ್ತೂರ ಬಾ ಗಾಂಧಿ ಬಾಲಕಿಯರ ವಸತಿ ಶಾಲೆಯಲ್ಲಿ ಮನೋರಮ ಮಿಶ್ರಾ ಮತ್ತು ಗೋಲ್ಡಿ ಕಟಿಯಾರ್ ಎಂಬ ಇಬ್ಬರು ಶಿಕ್ಷಕಿಯರು ಕಾರ್ಯನಿರ್ವಹಿಸುತ್ತಿದ್ದರು. ಇವರುಗಳನ್ನು ಇತ್ತೀಚೆಗೆ ಮತ್ತೊಂದು ಜಿಲ್ಲೆಗೆ ವರ್ಗಾವಣೆ ಮಾಡಲಾಗಿತ್ತು.
ಬೇಸಿಗೆ ದಾಹ ತಣಿಸೋ ಮಾವಿನ ಹಣ್ಣಿನ ಕುಲ್ಫಿ
ತಮ್ಮ ವರ್ಗಾವಣೆಯನ್ನು ರದ್ದುಗೊಳಿಸಿಕೊಳ್ಳಲು ಶಿಕ್ಷಕಿಯರು ಏನೆಲ್ಲಾ ಪ್ರಯತ್ನ ಮಾಡಿದರೂ ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಬ್ಬರು ಶಿಕ್ಷಕಿಯರು ರಾತ್ರಿ ಊಟವಾದ ಬಳಿಕ 20 ಬಾಲಕಿಯರನ್ನು ಮಹಡಿಗೆ ಕರೆದುಕೊಂಡು ಹೋಗಿ ಕೋಣೆಯೊಂದರಲ್ಲಿ ಕೂಡಿ ಹಾಕಿದ್ದಾರೆ.
ಇದರಿಂದ ಭಯಭೀತರಾದ ವಿದ್ಯಾರ್ಥಿನಿಯರು ಜೋರಾಗಿ ಕಿರುಚಿಕೊಂಡು ಅಳಲು ಆರಂಭಿಸಿದ್ದಾರೆ. ಕೂಡಲೇ ಎಚ್ಚೆತ್ತ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ವಿದ್ಯಾರ್ಥಿನಿಯರನ್ನು ಬಿಡುಗಡೆ ಮಾಡಿದ್ದಾರೆ. ಘಟನೆ ಸಂಬಂಧ ಶಿಕ್ಷಕಿಯರ ವಿರುದ್ಧ ಈಗ ದೂರು ದಾಖಲಾಗಿದ್ದು, ಕ್ರಮಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.