ಇಂಗ್ಲೆಂಡ್ ಸರಣಿಗೆ ತೆರಳಿರುವ ಟೀಂ ಇಂಡಿಯಾ 23 ಆಟಗಾರರಲ್ಲಿ ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 20 ದಿನಗಳ ವಿರಾಮದ ಅವಧಿಯಲ್ಲಿ ಈ ಇಬ್ಬರು ಆಟಗಾರರು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ ಅನ್ನೋದು ತಿಳಿದುಬಂದಿದೆ. ಸೋಂಕಿತ ಆಟಗಾರರು ಡುರ್ಹಾಮ್ಗೆ ಪ್ರಯಾಣ ಬೆಳೆಸೋದಿಲ್ಲ ಎಂದು ವರದಿ ಹೇಳಿದೆ.
ಅಲ್ಲದೇ ಈ ಇಬ್ಬರು ಆಟಗಾರರಲ್ಲಿ ಒಬ್ಬರು ಈಗಾಗಲೇ ಕೊರೊನಾ ನೆಗೆಟಿವ್ ವರದಿ ಪಡೆದಿದ್ದಾರೆ. ಮತ್ತೋರ್ವ ಆಟಗಾರ ಇನ್ನೂ ಐಸೋಲೇಷನ್ನಲ್ಲೇ ಇದ್ದಾರೆ ಎನ್ನಲಾಗಿದೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಇತ್ತೀಚೆಗಷ್ಟೇ ಬ್ರಿಟನ್ನಲ್ಲಿರುವ ಟೀಂ ಇಂಡಿಯಾ ಆಟಗಾರರಿಗೆ ಕೊರೊನಾ ಸೋಂಕು ಹೆಚ್ಚಳದ ಬಗ್ಗೆ ಎಚ್ಚರಿಕೆ ನೀಡುವ ಇ ಮೇಲ್ ಕಳುಹಿಸಿದ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ. ಕೊರೊನಾ ಸೋಂಕಿಗೆ ಒಳಗಾದ ಆ ಇಬ್ಬರು ಆಟಗಾರರು ಲಕ್ಷಣ ರಹಿತ ಸೋಂಕನ್ನ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಟೀಂ ಇಂಡಿಯಾ ಸದಸ್ಯರಲ್ಲಿ ಓರ್ವ ಆಟಗಾರ ಕೊರೊನಾ ಪಾಸಿಟಿವ್ ವರದಿ ಪಡೆದಿದ್ದು ಲಕ್ಷಣ ರಹಿತ ಸೋಂಕನ್ನ ಹೊಂದಿದ್ದಾರೆ. ಇವರನ್ನ ಕ್ವಾರಂಟೈನ್ನಲ್ಲಿ ಇಡಲಾಗಿದೆ. ಸೋಂಕಿತ ಆಟಗಾರ ತಂಡದ ಜೊತೆಯಲ್ಲಿ ಡುರ್ಹಾನ್ಗೆ ಪ್ರಯಾಣ ಬೆಳೆಸುತ್ತಿಲ್ಲ ಎಂದು ಬಿಸಿಸಿಐ ಉನ್ನತ ಮೂಲಗಳು ಮಾಹಿತಿ ನೀಡಿವೆ.
ಬ್ರಿಟನ್ನಲ್ಲಿ ಡೆಲ್ಟಾ ರೂಪಾಂತರಿಯ ಹಾವಳಿ ಮಿತಿಮೀರಿದೆ. ಈ ಸಂಬಂಧ ಇ ಮೇಲ್ ಮಾಡಿ ಎಚ್ಚರಿಕೆ ನೀಡಿದ್ದ ಜಯ್ ಶಾ, ಕೋವಿಶೀಲ್ಡ್ನಿಂದ ನಿಮಗೆ ರಕ್ಷಣೆ ಸಿಕ್ಕಿದ್ದರೂ ಸಹ ನೀವು ಕೊರೊನಾದಿಂದ ಸಂಪೂರ್ಣ ಸುರಕ್ಷಿತರಲ್ಲ . ಹೀಗಾಗಿ ಜನಸಂದಣಿ ಪ್ರದೇಶಗಳಿಂದ ದೂರವೇ ಇರಿ ಎಂದು ಹೇಳಿದ್ದರು ಎನ್ನಲಾಗಿದೆ.