ಮುಂಬರುವ ವಿನು ಮಂಕಡ್ ಟ್ರೋಫಿ ಪಂದ್ಯಾವಳಿಗೆ ಬಿಸಿಸಿಐ ತಯಾರಿ ನಡೆಸುತ್ತಿದೆ. ಆದರೆ ಬಿಹಾರ ಕ್ರಿಕೆಟ್ ಅಸೋಸಿಯೇಷನ್ ಸಂಸ್ಥೆಯು ಇಬ್ಬರು ಬಿಜೆಪಿ ನಾಯಕರ ಜಗಳದಲ್ಲಿ ಸಿಲುಕಿ ಒದ್ದಾಡುತ್ತಿದೆ.
ಕಳೆದ ಕೆಲ ವಾರಗಳಿಂದ ಎರಡು ಅಂಡರ್ 19 ಕ್ರಿಕೆಟ್ ತಂಡವನ್ನು ಬಿಹಾರದ ಇಬ್ಬರು ಬಿಜೆಪಿ ನಾಯಕರು ಮುನ್ನಡೆಸುತ್ತಿದ್ದಾರೆ. ಇಬ್ಬರೂ ತಮ್ಮನ್ನು ತಾವು ಬಿಸಿಎ ಅಧ್ಯಕ್ಷ ಎಂದು ಹೇಳಿಕೊಳ್ತಿದ್ದಾರೆ.
ಬಿಹಾರ ಬಿಜೆಪಿ ಮಾಜಿ ಖಜಾಂಚಿ ಹಾಗೂ ಬಿಸಿಎ ಅಧ್ಯಕ್ಷ ರಾಕೇಶ್ ತಿವಾರಿ ಹಾಗೂ ಮಾಜಿ ಶಾಸಕ ಮತ್ತು ಬಿಜೆಪಿ ವಕ್ತಾರ ಪ್ರೇಮ್ ರಂಜನ್ ಪಟೇಲ್ರ ನಡುವಿನ ಈ ಮುಸುಕಿನ ಗುದ್ದಾಟದಿಂದಾಗಿ ಬಿಹಾರ ಅಂಡರ್ 19 ತಂಡ ಇದೀಗ 2 ಭಾಗವಾಗಿದೆ.
ಕಳೆದ ಬಿಸಿಸಿಐ ಎಜಿಎಂಗೆ ಹಾಜರಾಗಿದ್ದ ತಿವಾರಿ ಅಂಡರ್ 19 ತಂಡಕ್ಕೆ 135 ಆಟಗಾರರನ್ನು ಶಾರ್ಟ್ ಲಿಸ್ಟ್ ಮಾಡಿರೋದಾಗಿ ಹೇಳಿದ್ದಾರೆ. ಸೆಪ್ಟೆಂಬರ್ 14ರಂದು ಕ್ಯಾಂಬರ್ ಮುಗಿದ ಬಳಿಕ ಪಟ್ಟಿ ಬಿಡುಗಡೆ ಮಾಡೋದಾಗಿ ಹೇಳ್ತಿದ್ದಾರೆ. ಆದರೆ ಈ ನಡುವೆ ಪಟೇಲ್ ನೇತೃತ್ವದ ಬಂಡಾಯ ಗುಂಪು ಈಗಾಗಲೇ ಬಿಹಾರ ಅಂಡರ್ 19 ತಂಡದ ಪಟ್ಟಿಯನ್ನು ಬಿಸಿಸಿಐಗೆ ಕಳುಹಿಸಿದೆ.
ಪಟೇಲ್ ಆಯ್ಕೆ ಮಾಡಿರುವ ಆಟಗಾರರು ಬಿಸಿಎನಲ್ಲಿ ಹೆಸರು ನೋಂದಾಯಿಸಿಲ್ಲ ಎಂದು ತಿವಾರಿ ಹೇಳಿದ್ದಾರೆ.
ಅವರು ಯಾರೆಂದೂ ಗೊತ್ತಿಲ್ಲ, ಅವರಿಗೆ ಯಾವುದೇ ಕಚೇರಿಯಿಲ್ಲ, ಅಧಿಕೃತ ಇ ಮೇಲ್ ಕೂಡ ಇಲ್ಲ. ಅವರ ಚುನಾವಣೆ ಯಾವಾಗ ನಡೆಯಿತು..? ಅವರ ಸದಸ್ಯರು ಯಾರು..? ಕೆಲವರಿಗೆ ಗೊಂದಲ ಸೃಷ್ಟಿಸುವುದೇ ಒಂದು ಕೆಲಸ ಎಂದು ತಿವಾರಿ ಆಕ್ರೋಶ ಹೊರ ಹಾಕಿದ್ದಾರೆ.
ತನ್ನನ್ನು ತಾನು ಬಿಸಿಎ ಅಧ್ಯಕ್ಷ ಎಂದು ಹೇಳಿಕೊಂಡಿರುವ ಪಟೇಲ್, ಕಳೆದ ವರ್ಷ ತುರ್ತು ಸಭೆಯೊಂದನ್ನು ಕರೆಯಲಾಗಿತ್ತು, ಆಗ ತಿವಾರಿಯನ್ನು ಬಿಸಿಎ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿತ್ತು. 38 ಜಿಲ್ಲೆಗಳ ಪೈಕಿ 28 ಜಿಲ್ಲೆಗಳ ಅಸೋಸಿಯೇಷನ್ ಈ ಸಭೆಯಲ್ಲಿ ಭಾಗಿಯಾಗಿತ್ತು ಹಾಗೂ ನನ್ನನ್ನು ಬಿಸಿಎ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದರು ಎಂದು ಹೇಳಿದ್ದಾರೆ.
ಈ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಸಿಂಗ್, ಈ ಬಗ್ಗೆ ಬೋರ್ಡ್ ಮೇಲ್ವಿಚಾರಣೆ ನಡೆಸಲಿದೆ. ಒಂದೇ ರಾಜ್ಯದಿಂದ ಎರಡು ತಂಡಗಳ ಆಯ್ಕೆಯನ್ನು ಬಿಸಿಸಿಐ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.