ಹಿಜಾಬ್ ಧರಿಸಿಲ್ಲ ಎಂಬ ಕಾರಣಕ್ಕೆ ಮಾಹ್ಸಾ ಅಮಿನಿಯ ಹತ್ಯೆಯ ನಂತರ ಇರಾನ್‌ನಲ್ಲಿ ನಡೆದ ಹಿಜಾಬ್ ವಿರೋಧಿ ಪ್ರತಿಭಟನೆಗಳಿಗೆ ಬೆಂಬಲ ವ್ಯಕ್ತಪಡಿಸಲು ಜನಪ್ರಿಯ ಟರ್ಕಿಶ್ ಗಾಯಕಿ ಮೆಲೆಕ್ ಮೊಸ್ಸೊ ಲೈವ್ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ತಮ್ಮಕೂದಲು ಕತ್ತರಿಸಿಕೊಂಡಿದ್ದಾರೆ.
ಆ ಕಲಾವಿದೆ ವೇದಿಕೆಯ ಮೇಲೆ ತನ್ನ ಕೂದಲನ್ನು ಕತ್ತರಿಸಿ, ಹಿಜಾಬ್ ವಿರೋಧಿ ಪ್ರತಿಭಟನಾಕಾರರ ಪರ ತನ್ನ ಬೆಂಬಲವನ್ನು ಸೂಚಿಸಿದಾಗ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಆಕೆಯನ್ನು ಹುರಿದುಂಬಿಸಿದರು.
ಈ ಮುನ್ನ ಟ್ವೀಟ್ ಮಾಡಿ ಇರಾನ್‌ನಲ್ಲಿರುವ ನನ್ನ ಸಹೋದರಿಯರೊಂದಿಗೆ ಅವರ ನ್ಯಾಯಯುತ ಪ್ರತಿರೋಧದಲ್ಲಿ ನಾನು ಇದ್ದೇನೆ ಎಂದು ಈ ಗಾಯಕಿ ಸಂದೇಶ ಕಳಿಸಿದ್ದಾರೆ. ಅವರು ಕೂದಲಿನಿಂದ ರಚಿಸಲಾದ ಧ್ವಜದ ಚಿತ್ರವನ್ನು ಅಪ್‌ಲೋಡ್ ಮಾಡುತ್ತಾ, ಎಲ್ಲರಿಗೂ ಸಮಾನ ಮತ್ತು ಮುಕ್ತ ಜಗತ್ತು #ಮಹಸ_ಅಮಿನಿ” ಎಂದು ಟ್ವೀಟ್ ಮಾಡಿದ್ದರು.
22 ವರ್ಷದ ಅಮಿನಿ ಎಂಬಾಕೆ ಹಿಜಾಬ್ ಧರಿಸದ ಕಾರಣ ಇರಾನ್‌ನ ನೈತಿಕ ಪೊಲೀಸರು ಬಂಧಿಸಿದ್ದರು. ಬಳಿಕ ಆಕೆಯನ್ನು ಪೊಲೀಸ್ ಕಸ್ಟಡಿಯಲ್ಲಿ ಥಳಿಸಲಾಯಿತು, ನಂತರ ಸಾವನ್ನಪ್ಪಿದ್ದಳು.
ಇರಾನ್‌ನ ಕಟ್ಟುನಿಟ್ಟಾದ ಹಿಜಾಬ್ ನಿಯಮಗಳನ್ನು ಜಾರಿಗೊಳಿಸುವ ನೈತಿಕತೆಯ ಪೊಲೀಸರ ಬಂಧನದ ನಂತರ ಅಮಿನಿ ಕೋಮಾಕ್ಕೆ ಜಾರಿದ್ದಳು. ಆಕೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಮತ್ತು ಕೆಟ್ಟದಾಗಿ ನಡೆಸಿಕೊಳ್ಳಲಿಲ್ಲ ಎಂದು ಪೊಲೀಸರು ಹೇಳುತ್ತಾರೆ, ಆದರೆ ಆಕೆಯ ಕುಟುಂಬವು ಆ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ.
ಅಮಿನಿಯ ಸಾವು ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಬೀದಿಗಳಲ್ಲಿ ಇರಾನಿಯನ್ನರಿಂದ ಭಾರೀ ಪ್ರತಿಭಟನೆಯನ್ನು ಹುಟ್ಟುಹಾಕಿತು. ಹಲವಾರು ಮಹಿಳೆಯರು ಪ್ರತಿಭಟನೆಯ ಸಂಕೇತವಾಗಿ ತಮ್ಮ ಕೂದಲನ್ನು ಕತ್ತರಿಸಿ ಹಿಜಾಬ್ ಅನ್ನು ತೆಗೆದುಹಾಕಿದ್ದರು. ಪ್ರತಿಭಟನೆಗಳು ಮಂಗಳವಾರ ಹನ್ನೊಂದನೇ ದಿನಕ್ಕೆ ಕಾಲಿಡುತ್ತಿದ್ದಂತೆ ಇರಾನ್‌ನ ದಮನ ನೀತಿಗೆ 75 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.