ಬುಡಕಟ್ಟು ಜನಾಂಗಕ್ಕೆ ಸೇರಿದ ವ್ಯಕ್ತಿಯೊಬ್ಬ ಒಂದೇ ಮಂಟಪದಲ್ಲಿ ಇಬ್ಬರು ಸೋದರ ಸಂಬಂಧಿ ಯುವತಿಯರನ್ನ ಮದುವೆಯಾದ ಘಟನೆ ತೆಲಂಗಾಣದ ಆದಿಲಾಬಾದ್ ಜಿಲ್ಲೆಯ ಉತ್ನೂರ್ ಮಂಡಲದಲ್ಲಿ ನಡೆದಿದೆ. ಈ ವಿಚಿತ್ರ ಮದುವೆಗೆ ವಧು ಹಾಗೂ ವರನ ಕುಟುಂಬಸ್ಥರಿಬ್ಬರೂ ಒಪ್ಪಿಗೆ ನೀಡಿದ್ದರು ಎನ್ನಲಾಗಿದೆ.ಈ ರೀತಿ ಮದುವೆಯಾಗೋದು ನಮ್ಮ ಜನಾಂಗದ ಸಂಪ್ರದಾಯವಾಗಿದೆ ಎಂದು ಇವರು ಹೇಳಿದ್ದಾರೆ.
ಘಾನಪುರ ಜಿಲ್ಲೆಯ ಅರ್ಜುನ್ ಎಂಬಾತ ಕಳೆದ 2 ವರ್ಷಗಳಿಂದ ಈ ಇಬ್ಬರೂ ಯುವತಿಯರೊಂದಿಗೆ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ಇಬ್ಬರು ಯುವತಿಯರು ಅರ್ಜುನ್ ಅತ್ತೆಯ ಮಕ್ಕಳಾಗಿದ್ದಾರೆ. ಇದರಲ್ಲಿ ಉಷಾರಾಣಿ ಎಂಬಾಕೆ ಇದೇ ಗ್ರಾಮದವಳಾಗಿದ್ದರೆ ಸೂರ್ಯಕಲಾ ನೆರೆಯ ಸಂಬುಗುಧಮ್ ಗ್ರಾಮದವಳಾಗಿದ್ದಾಳೆ.
ಕಳೆದ ತಿಂಗಳು ಶಿಕ್ಷಕರ ತರಬೇತಿಯನ್ನ ಮುಗಿಸಿದ ಅರ್ಜುನ್ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದ. ಈ ವೇಳೆ ಈತ ನಾನು ಉಷಾರಾಣಿ ಹಾಗೂ ಸೂರ್ಯಕಲಾ ಇಬ್ಬರನ್ನೂ ಪ್ರೀತಿಸುತ್ತಿರೋದಾಗಿ ಹೇಳಿಕೊಂಡಿದ್ದಾನೆ. ಇಬ್ಬರನ್ನೂ ಮದುವೆಯಾಗಲು ತಾನು ತಯಾರಿದ್ದೇನೆ ಎಂದು ಕುಟುಂಬಸ್ಥರ ಎದುರು ಹೇಳಿದ್ದಾನೆ.
ಬಳಿಕ ಎಲ್ಲರೂ ಈ ಮದುವೆಗೆ ಒಪ್ಪಿಕೊಂಡಿದ್ದಾರೆ. ಹೀಗಾಗಿ ಅರ್ಜುನ್ ಉಷಾರಾಣಿ ಹಾಗೂ ಸೂರ್ಯಕಲಾರನ್ನ ಒಂದೇ ಮಂಟಪದಲ್ಲಿ ಒಂದೇ ಮುಹೂರ್ತದಲ್ಲಿ ವರಿಸಿದ್ದಾನೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಮಂಡಲ ಪರಿಷತ್ ಅಧ್ಯಕ್ಷ ಪಂದ್ರಾ ಜೈವನ್ಥಾರಾಓ ಇಬ್ಬರು ವಧುಗಳ ಒಪ್ಪಿಗೆಯನ್ನ ಪಡೆದೇ ಈ ಮದುವೆ ನಡೆಸಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ಬುಡಕಟ್ಟು ಜನಾಂಗದವರಲ್ಲಿ ಇದೊಂದು ಸರ್ವೇಸಾಮಾನ್ಯ ಪದ್ಧತಿಯಾಗಿದೆ. ಇವರು ಒಂದೇ ಮುಹೂರ್ತದಲ್ಲಿ ಇಬ್ಬರು ಮಹಿಳೆಯರನ್ನ ಮದುವೆಯಾಗುವ ಆಚರಣೆ ಹೊಂದಿದ್ದಾರೆ ಎಂದು ಹೇಳಿದ್ರು.