ಕಲುಷಿತ ಮೀನನ್ನು ಸೇವನೆ ಮಾಡಿದ ಮಹಿಳೆಯು ತನ್ನ ದೇಹದ ನಾಲ್ಕು ಅಂಗಗಳನ್ನೇ ಕಳೆದುಕೊಂಡಂತಹ ಘಟನೆಯೊಂದು ಕ್ಯಾಲಿಫೋರ್ನಿಯಾದಲ್ಲಿ ಸಂಭವಿಸಿದೆ. 40 ವರ್ಷದ ಲಾರಾ ಬರಾಜಾಸ್ ಎಂಬವರು ಅರೆಬೆಂದ ಕಲುಷಿತ ಟಿಲಾಪಿಯಾ ಮೀನನ್ನು ಸೇವಿಸಿದ ಪರಿಣಾಮ ಬ್ಯಾಕ್ಟೀರಿಯಾ ಸೋಂಕಿಗೆ ಒಳಗಾಗಿದ್ದಾರೆ.
ಆಸ್ಪತ್ರೆಯಲ್ಲಿ ಬರೋಬ್ಬರಿ ಒಂದು ತಿಂಗಳ ಶಸ್ತ್ರಚಿಕಿತ್ಸೆ ಬಳಿಕ ಆಕೆಯ ಜೀವವನ್ನು ಉಳಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಆದರೆ ಬ್ಯಾಕ್ಟೀರಿಯಾ ಸೋಂಕಿನಿಂದಾಗಿ ಆಕೆಯ ಕೆಲ ಅಂಗಗಳನ್ನು ಕತ್ತರಿಸಬೇಕಾಗಿ ಬಂತು. ಇದು ನಿಜಕ್ಕೂ ಒಂದು ಆಘಾತಕಾರಿ ಘಟನೆಯಾಗಿದೆ. ಸ್ವಲ್ಪ ಮೈಮರೆತರೂ ನಮ್ಮ ಜೀವನದಲ್ಲಿಯೂ ಇಂತಹ ಘಟನೆ ಸಂಭವಿಸಬಹುದು ಎಂದು ಬರಾಜಾಸ್ ಸ್ನೇಹಿತೆ ಅನ್ನಾ ಮೆಸ್ಸಿನ್ನಾ ಹೇಳಿದ್ದಾರೆ.
ಸ್ಯಾನ್ ಜೋಸ್ನ ಸ್ಥಳೀಯ ಮಾರುಕಟ್ಟೆಯಲ್ಲಿ ಖರೀದಿ ಮಾಡಿದ ಮೀನಿನಿಂದ ಬಜಾರಾಸ್ ಮನೆಯಲ್ಲಿ ಅಡುಗೆ ಮಾಡಿದ್ದಾರೆ. ಇದನ್ನು ಸೇವಿಸಿದ ಕೆಲವೇ ಗಂಟೆಗಳಲ್ಲಿ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು. ಕೇವಲ ಉಸಿರಾಟವೊಂದನ್ನು ಬಿಟ್ಟರೆ ಅವರ ದೇಹದಲ್ಲಿ ಇನ್ಯಾವುದೇ ಚಲನೆ ಇರಲಿಲ್ಲ ಎಂದು ಮೆಸ್ಸಿನಾ ಹೇಳಿದ್ದಾರೆ.
ಅಲ್ಲದೇ ಅವರ ಪಾದ, ಬೆರಳುಗಳು ಹಾಗೂ ತುಟಿ ಕಪ್ಪು ಬಣ್ಣಕ್ಕೆ ತಿರುಗಿತ್ತು. ಅವರು ಸಂಪೂರ್ಣ ಕೋಮಾಗೆ ಜಾರಿದ್ದರು ಎನ್ನಲಾಗಿದೆ. ಮಾಧ್ಯಮಗಳ ವರದಿ ಪ್ರಕಾರ, ಪ್ರತಿ ವರ್ಷ ಈ ರೀತಿಯ 100 ರಿಂದ 150 ಪ್ರಕರಣಗಳು ವರದಿಯಾಗುತ್ತದೆ ಎನ್ನಲಾಗಿದೆ.