ಬ್ಲೂಟೂತ್ ಹೆಡ್ಫೋನ್ ಸ್ಪೋಟಗೊಂಡ ಪರಿಣಾಮ ಯುವಕ ಸಾವನ್ನಪ್ಪಿದ ದಾರುಣ ಘಟನೆ ರಾಜಸ್ಥಾನದ ಜೈಪುರ ಜಿಲ್ಲೆಯಲ್ಲಿ ನಡೆದಿದೆ. ವೈರ್ಲೆಸ್ ಹೆಡ್ಫೋನ್ ಸ್ಫೋಟಗೊಂಡ ಆಘಾತಕ್ಕೆ ಯುವಕನಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.
ಮೃತ ಯುವಕನನ್ನು ಉದೈಪುರಿಯಾ ನಿವಾಸಿ ರಾಕೇಶ್ ಎಂದು ಗುರುತಿಸಲಾಗಿದೆ. ಈತ ಬ್ಲೂಟೂತ್ ಹೆಡ್ಫೋನ್ ಬಳಸಿ ಫೋನ್ ಕರೆಯಲ್ಲಿ ಮಾತನಾಡುತ್ತಿದ್ದ ಎನ್ನಲಾಗಿದೆ. ಕೂಡಲೇ ಈ ಸಾಧನವು ಸ್ಫೋಟಗೊಂಡಿದೆ. ಇದರಿಂದ ರಾಕೇಶ್ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ರಾಕೇಶ್ನ ಎರಡೂ ಕಿವಿಗಳಿಗೂ ಗಂಭೀರ ಗಾಯವಾಗಿತ್ತು. ಕೂಡಲೇ ಈತನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ.
ಇನ್ನು ಈ ವಿಚಾರವಾಗಿ ಮಾತನಾಡಿದ ವೈದ್ಯ ಎಲ್.ಎನ್ ರುಂದ್ಲಾ, ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದ್ದಾಗಲೇ ಸಾವನ್ನಪ್ಪಿದ್ದಾನೆ. ಬಹುಶಃ ಇದು ದೇಶದಲ್ಲೇ ಮೊದಲ ಘಟನೆ ಇರಬಹುದು ಎಂದು ಹೇಳಿದ್ದಾರೆ.