ಕಳೆದ 24 ಗಂಟೆಗಳಲ್ಲಿ ಗುಜರಾತ್ ನಲ್ಲಿ ನವರಾತ್ರಿ ಆಚರಣೆಯ ಸಂದರ್ಭದಲ್ಲಿ ಗರ್ಬಾ ಪ್ರದರ್ಶನ ಮಾಡುವಾಗ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
13 ವರ್ಷದ ಬಾಲಕ ಸೇರಿ 10 ಮಂದಿ ಮೃತಪಟ್ಟಿದ್ದಾರೆ.ಶುಕ್ರವಾರ, ಅಹಮದಾಬಾದ್ ನಲ್ಲಿ 24 ವರ್ಷದ ಯುವಕ ಗರ್ಬಾ ಆಡುವಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಅಂತೆಯೇ, ಕಪಡ್ವಾಂಜ್ನ 17 ವರ್ಷದ ಬಾಲಕ ಕೂಡ ಗರ್ಬಾ ಆಡುವಾಗ ಸಾವನ್ನಪ್ಪಿದ್ದಾನೆ. ಕಳೆದ ಒಂದು ದಿನದಲ್ಲಿ ರಾಜ್ಯದಲ್ಲಿ ಇದೇ ರೀತಿಯ ಸರಣಿ ಪ್ರಕರಣಗಳು ವರದಿಯಾಗಿವೆ.
ಈ ರೀತಿ ಸಾವನ್ನಪ್ಪುತ್ತಿರುವವರಲ್ಲಿ ಹೆಚ್ಚಿನವರು ಹದಿಹರೆಯದವರಿಂದ ಮಧ್ಯವಯಸ್ಕ ಜನರು ಎಂಬುದು ಮತ್ತೊಂದು ಆತಂಕದ ವಿಚಾರವಾಗಿದೆ.ಇದಲ್ಲದೆ, ನವರಾತ್ರಿಯ ಮೊದಲ ಆರು ದಿನಗಳಲ್ಲಿ, 108 ತುರ್ತು ಆಂಬ್ಯುಲೆನ್ಸ್ ಸೇವೆಗಳಿಗೆ ಹೃದಯ ಸಂಬಂಧಿತ ಸಮಸ್ಯೆಗಳಿಗೆ 521 ಕರೆಗಳು ಮತ್ತು ಉಸಿರಾಟದ ತೊಂದರೆಗಾಗಿ ಹೆಚ್ಚುವರಿ 609 ಕರೆಗಳು ಬಂದಿವೆ. ಈ ಕರೆಗಳನ್ನು ಸಾಮಾನ್ಯವಾಗಿ ಗರ್ಬಾ ಆಚರಣೆಗಳು ನಡೆಯುವ ಸಂಜೆ 6 ರಿಂದ ಮುಂಜಾನೆ 2 ರವರೆಗೆ ರೆಕಾರ್ಡ್ ಮಾಡಲಾಗಿದೆ.
ನವರಾತ್ರಿ ಹಬ್ಬವನ್ನು ಗುಜರಾತ್ ರಾಜ್ಯದ ಹಲವು ಕಡೆ ಬಹಳ ವಿಜೃಂಭಣೆಯಿಂದ ನಡೆಸಲಾಗುತ್ತದೆ. ಈ ವೇಳೆ ಗರ್ಭಾ ನೃತ್ಯ ಕಾರ್ಯಕ್ರಮಗಳು ಬಹಳಷ್ಟು ಕಡೆ ನಡೆಯುತ್ತಿರುತ್ತವೆ. ಗರ್ಬಾ ನೃತ್ಯ ಸಮಾರಂಭಗಳಲ್ಲಿ ಯುವಕರು ಮತ್ತು ಹಿರಿಯರು ಭಾಗವಹಿಸುತ್ತಾರೆ.