ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಭಾರತದಲ್ಲಿ ಬಹು ನಿರೀಕ್ಷಿತ ಹಿಲಕ್ಸ್(Hilux) ಲೈಫ್‌ಸ್ಟೈಲ್ ಪಿಕಪ್ ಟ್ರಕ್ ಅನ್ನು ಅನಾವರಣಗೊಳಿಸಿದೆ. ಹಿಲಕ್ಸ್ ಭಾರತೀಯ ಮಾರುಕಟ್ಟೆಯಲ್ಲಿ ಮಾರ್ಚ್‌ನಲ್ಲಿ ಮಾರಾಟವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಟೊಯೊಟಾ ಹಿಲಕ್ಸ್ ಅನ್ನು ಡಬಲ್-ಕ್ಯಾಬ್ ರೂಪಾಂತರದಲ್ಲಿ ಮಾತ್ರ ನೀಡಲಾಗುವುದು.
ಹಿಲಕ್ಸ್ ಟ್ರಕ್ IMV-2 ಪ್ಲಾಟ್ ಫಾರ್ಮ್‌ನಿಂದ ಹುಟ್ಟಿಕೊಂಡಿದೆ ಅಷ್ಟೇ ಅಲ್ಲಾ, ಫಾರ್ಚುನರ್‌ನಿಂದ ಎರವಲು ಪಡೆದ ಕೆಲವು ಬಿಟ್‌ಗಳಿವೆ. ಹಾಗಂತ ಹಿಲಕ್ಸ್ ಯಾವುದೇ ಪ್ರಸ್ತುತ ಇರುವ ವಾಹನಗಳ ಕಾರ್ಬನ್ ಕಾಪಿ ಅಲ್ಲಾ, ಇದರ ಫ್ರಂಟ್ ಭಾಗ ಭಾರತದ ಮಾರುಕಟ್ಟೆಗೆ ತಾಜಾವಾಗಿದೆ ಎಂದರು ತಪ್ಪಾಗಲ್ಲ. ಇದು ಇಡೀ ಶ್ರೇಣಿಗೆ ತನ್ನದೇ ಆದ ಗುರುತು ನೀಡಿದೆ.
ಎಲ್ಇಡಿ ಡಿಆರ್ಎಲ್ಗಳೊಂದಿಗೆ ಸ್ವೆಪ್ಟ್ಬ್ಯಾಕ್ ಎಲ್ಇಡಿ ಹೆಡ್ಲ್ಯಾಂಪ್ಗಳಿಂದ ಸುತ್ತುವರೆದಿರುವ ದೊಡ್ಡ ಷಡ್ಭುಜಾಕೃತಿಯ ಗ್ರಿಲ್ ಎದ್ದು ಕಾಣುವುದರಿಂದ ಮೊದಲು ನೋಡಿದಾಗ ಇನ್ನೋವಾ ಕ್ರಿಸ್ಟಾ ಫೀಲ್ ನೀಡಿದರೂ, ಹಿಲಕ್ಸ್ ಲುಕ್ ತುಂಬಾ ಡಿಫರೆಂಟ್ ಆಗಿಯೆ ಇದೆ. ಬಂಪರ್ ತುಂಬಾ ಎತ್ತರವಾಗಿ ಮತ್ತು ಕೋನೀಯವಾಗಿ, ಅದರ ಬುಚ್ ಮುಖದೊಂದಿಗೆ ಚೆನ್ನಾಗಿ ಕಾಣುತ್ತದೆ. 18-ಇಂಚಿನ ಮಿಶ್ರಲೋಹದ ಚಕ್ರಗಳು, ಫ್ಲೇರ್ಡ್ ವೀಲ್ ಆರ್ಚ್‌ಗಳು, ಸೈಡ್-ಸ್ಟೆಪ್, ಬಾಡಿ ಕ್ಲಾಡಿಂಗ್ ಎಸ್‌ಯುವಿಗೆ ಮಸ್ಕುಲರ್ ಅಥವಾ ರಫ್ ಲುಕ್ ನೀಡುತ್ತದೆ. ಇನ್ನುಳಿದಂತೆ ಎಲ್‌ಇಡಿ ಟೈಲ್ ಲೈಟ್‌ಗಳು ಮತ್ತು ಬ್ಲ್ಯಾಕ್ ಔಟ್ ವಿಂಗ್ ಮಿರರ್‌ಗಳು ಮತ್ತು ಪಿಲ್ಲರ್‌ಗಳಂತಹ ಅಂಶಗಳು ವಾಹನದ ಆಕರ್ಷಣೆಯನ್ನು ಹೆಚ್ಚಿಸುತ್ತವೆ.
ಫಾರ್ಚುನರ್ ನಂತೆಯೆ ಹಿಲಕ್ಸ್, 2.8-ಲೀಟರ್, ನಾಲ್ಕು ಸಿಲಿಂಡರ್, ಡೀಸೆಲ್ ಎಂಜಿನ್ ಹೊಂದಿದೆ. ಪಿಕಪ್ ಟ್ರಕ್ ನ ಮ್ಯಾನುವಲ್ ರೂಪಾಂತರದಲ್ಲಿ 201 bhp ಮತ್ತು 420 Nm ಪೀಕ್ ಟಾರ್ಕ್ ಸಿಗುತ್ತದೆ. ಆದರೆ ಸ್ವಯಂಚಾಲಿತ ರೂಪಾಂತರವು 500 Nm ಪೀಕ್ ಟಾರ್ಕ್ ಅನ್ನು ಅಭಿವೃದ್ಧಿ ಪಡಿಸುತ್ತದೆ. ಕಾರು ತಯಾರಕರು 4×4 ಆವೃತ್ತಿಗಳಲ್ಲಿ ಮಾತ್ರ Hilux ಅನ್ನು ನೀಡಲಿದ್ದಾರೆ. ಈ SUV ಹಿಲ್-ಅಸಿಸ್ಟ್, ಬ್ರೇಕ್ ಅಸಿಸ್ಟ್, ಹಿಲ್ ಡಿಸೆಂಟ್ ಕಂಟ್ರೋಲ್ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP) ಸೇರಿದಂತೆ ಆಫ್-ರೋಡರ್‌ನಲ್ಲಿ ನಾವು ನಿರೀಕ್ಷಿಸುವ ಎಲ್ಲಾ ಡ್ರೈವ್-ಅಸಿಸ್ಟ್ ವೈಶಿಷ್ಟ್ಯಗಳೊಂದಿಗೆ ಸುಸಜ್ಜಿತವಾಗಿದೆ. ಸೀಮಿತ-ಸ್ಲಿಪ್ ಡಿಫರೆನ್ಷಿಯಲ್, ಡಿಫರೆನ್ಷಿಯಲ್ ಲಾಕ್ ಮತ್ತು 700 ಮಿಮೀನಷ್ಟು ವಾಟರ್ ವೇಡಿಂಗ್ ಸಾಮರ್ಥ್ಯವನ್ನು ಹೊಂದಿದೆ.
ಟೊಯೊಟಾ ಹಿಲಕ್ಸ್ ಅನ್ನು ಭಾರತದಲ್ಲಿ ಎಸ್‌ಕೆಡಿ ಘಟಕವಾಗಿ ಮಾರಾಟ ಮಾಡಲಾಗುವುದು. ಅಂದ್ರೆ ಈ ಯೂನಿಟ್ ಗಳ 30% ಒಟ್ಟುಗೂಡಿಸುವಿಕೆ ಅಥವಾ ಅಸೆಂಬ್ಲಿಂಗ್ ಕೆಲಸ ಕರ್ನಾಟಕದ ಬಿಡದಿಯಲ್ಲಿರುವ ಟೊಯೋಟಾ ಸ್ಥಾವರದಲ್ಲಿ ಸ್ಥಳೀಯವಾಗಿ ನಡೆಯಲಿದೆ. ಹಿಲಕ್ಸ್ ಭಾರತೀಯ ಮಾರುಕಟ್ಟೆಯಲ್ಲಿ ಇಸುಜು ಡಿ-ಮ್ಯಾಕ್ಸ್ ವಿ-ಕ್ರಾಸ್ ಲೈಫ್‌ಸ್ಟೈಲ್ ಪಿಕಪ್ ಟ್ರಕ್‌ಗೆ ಪ್ರತಿಸ್ಪರ್ಧಿಯಾಗಲಿದೆ.