ಬೆಂಗಳೂರು: ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತೆ ಟೊಮೆಟೊ ದರ ಭಾರಿ ಏರಿಕೆ ಕಂಡಿರುವುದು ನುಂಗಲಾರದ ತುತ್ತಾಗಿದೆ.
ಮಂಗಳವಾರ ಕೆಜಿಗೆ ಗರಿಷ್ಠ 80 ರೂ.ನಂತೆ ಟೊಮೆಟೊ ಮಾರಾಟವಾಗಿದೆ. ರೋಗ ಬಾಧೆ, ಮಳೆ ಕಾರಣದಿಂದ ಟೊಮೆಟೊ ಪೂರೈಕೆಯಲ್ಲಿ ಭಾರಿ ಕುಸಿತವಾಗಿದೆ. ಶೀಘ್ರದಲ್ಲಿಯೇ ಟೊಮೆಟೊ ದರ ಕೆಜಿಗೆ 100-120 ರೂಪಾಯಿ ವರೆಗೂ ಏರಿಕೆ ಕಾಣುವ ಸಾಧ್ಯತೆ ಇದೆ.
ಈಗಾಗಲೇ ಹಸಿರು ತರಕಾರಿ, ಸೊಪ್ಪು, ಬೀನ್ಸ್ ದರ ಏರಿಕೆಯಾಗಿದ್ದು, ಟೊಮೆಟೊ ದರ ಕೂಡ ಏರಿಕೆಯಾಗಿದೆ. ಬೆಂಗಳೂರಿನ ಚಿಲ್ಲರೆ ಅಂಗಡಿಗಳಲ್ಲಿ ನಾಲ್ಕೈದು ದಿನಗಳ ಹಿಂದೆ ಕೆಜಿಗೆ 40 ರೂಪಾಯಿ ಇದ್ದ ಟೊಮೆಟೊ ದರ ಈಗ 80 ರೂ.ಗೆ ಏರಿಕೆ ಕಂಡಿದೆ. ಎರಡು ಮತ್ತು ಮೂರನೇ ದರ್ಜೆಯ ಟೊಮೆಟೊ ದರ ಕೆಜಿ 50, 40 ರುಪಾಯಿಗೆ ಮಾರಾಟವಾಗುತ್ತಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.