ಬೆಂಗಳೂರು: ಒಂದು ವಾರದ ಹಿಂದೆಯಷ್ಟೇ ಕೆಜಿಗೆ 30- 40 ರೂಪಾಯಿಯಷ್ಟಿದ್ದ ಟೊಮೆಟೊ ಇದೀಗ ಶತಕದ ಸಮೀಪಕ್ಕೆ ಬಂದಿದೆ.
ಕೋಲಾರ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ 1 ಕೆಜಿ ಟೊಮೇಟೊ 70 ರಿಂದ 80 ರೂಪಾಯಿಗೆ ಮಾರಾಟವಾಗುತ್ತಿದೆ. ಉತ್ತಮ ಗುಣಮಟ್ಟದ 15 ಕೆಜಿ ತೂಕದ ಬಾಕ್ಸ್ ಟೊಮೆಟೊ 1100 ರೂಪಾಯಿವರೆಗೆ ಮಾರಾಟವಾಗುತ್ತಿದ್ದು, ಕೆಜಿ ಟೊಮೆಟೊಗೆ ಸರಾಸರಿ 73 ರೂ. ದರ ಇದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಟೊಮೆಟೊ ನಾಟಿ ಕಡಿಮೆಯಾಗಿದೆ. ರೋಗ ಬಾಧೆ, ಕಳಪೆ ಸಸಿಗಳ ಕಾರಣ ಟೊಮೆಟೊ ಇಳುವರಿ ಭಾರಿ ಪ್ರಮಾಣದಲ್ಲಿ ಕುಸಿತವಾಗಿದೆ. ಇನ್ನು ಸಾಲು ಸಾಲು ಹಬ್ಬಗಳು ಹಾಗೂ ಹೊರ ರಾಜ್ಯಗಳಿಂದಲೂ ಬೇಡಿಕೆ ಹೆಚ್ಚಾಗಿದ್ದರೂ, ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಟೊಮೇಟೊ ಪೂರೈಕೆ ಆಗುತ್ತಿರುವುದು ದರ ಏರಿಕೆಗೆ ಕಾರಣ ಎನ್ನಲಾಗಿದೆ.
ಚಿಕ್ಕಬಳ್ಳಾಪುರ ಮಾರುಕಟ್ಟೆಯಲ್ಲಿ ಒಂದು ಕೆಜಿ ಟೊಮೆಟೊ ದರ 80 ರಿಂದ 85 ರೂ. ವರೆಗೆ ಇದೆ. ರೋಗ ಬಾಧೆ ಸೇರಿ ಹಲವು ಕಾರಣದಿಂದ ಟೊಮೇಟೊ ಇಳುವರಿ ಕಡಿಮೆಯಾಗಿದೆ. ಜನವರಿಯವರೆಗೂ ಟೊಮೆಟೊ ದರ ಸ್ಥಿರವಾಗಿರುತ್ತದೆ ಎಂದು ಹೇಳಲಾಗಿದೆ.
ಬಾಗೇಪಲ್ಲಿ, ಚಿಂತಾಮಣಿ, ಕೋಲಾರ ಎಪಿಎಂಸಿಗಳಿಂದ ಹೊರ ರಾಜ್ಯಗಳಿಗೂ ಟೊಮೆಟೊ ರವಾನೆ ಮಾಡಲಾಗುತ್ತದೆ. ಕೋಲಾರದಿಂದ ಸದ್ಯಕ್ಕೆ ಬಾಂಗ್ಲಾದೇಶಕ್ಕೆ ಟೊಮೆಟೊ ಪೂರೈಕೆ ಸ್ಥಗಿತವಾಗಿದ್ದು, ತಮಿಳುನಾಡು, ತೆಲಂಗಾಣ, ಒಡಿಶಾ, ಪಶ್ಚಿಮ ಬಂಗಾಳಗಳಿಂದ ಹೆಚ್ಚಿನ ಬೇಡಿಕೆ ಇದೆ. ಹೀಗಾಗಿ ದರ ಏರುಗತಿಯಲ್ಲಿ ಸಾಗಿದೆ.
ಕೇಂದ್ರ ಸರ್ಕಾರ ಟೊಮೇಟೊ ಬೆಲೆ ಏರಿಕೆ ನಿಯಂತ್ರಣ ಉದ್ದೇಶದಿಂದ ರಿಯಾಯಿತಿ ದರದಲ್ಲಿ ಮಾರಾಟ ಆರಂಭಿಸಿದೆ. ದೆಹಲಿಯಲ್ಲಿ ಪ್ರತಿ ಕೆಜಿಗೆ 65 ರೂ.ನಂತೆ ಚಿಲ್ಲರೆ ಮಾರಾಟಕ್ಕೆ ಕೇಂದ್ರ ಸರ್ಕಾರ ಸೋಮವಾರ ಚಾಲನೆ ನೀಡಿದೆ.