ಬೆಂಗಳೂರು: ಭಾರೀ ಮಳೆಯ ಕಾರಣ ಹೊಲದಲ್ಲಿಯೇ ಟೊಮೋಟೊ ಸೇರಿ ವಿವಿಧ ಬೆಳೆ ಹಾಳಾಗಿದ್ದು, ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಟೊಮೇಟೊ ಪೂರೈಕೆಯಾಗುತ್ತಿದೆ. ಇದರ ಪರಿಣಾಮ ಟೊಮೆಟೊ ದರ ದಿಢೀರ್ ಏರಿಕೆ ಕಂಡಿದೆ. ಚಿಲ್ಲರೆ ಮಳಿಗೆಗಳಲ್ಲಿ ಒಂದು ಕೆಜಿಗೆ 150 ರೂ. ನಂತೆ ಮಾರಾಟವಾಗಿದೆ.
ಕಳೆದ 15 -20 ದಿನಗಳಿಂದ ಟೊಮೆಟೊ ದರ ಏರುಗತಿಯಲ್ಲಿ ಸಾಗುತ್ತಿದೆ. ಚಿಲ್ಲರೆ ಮಳಿಗೆಗಳಲ್ಲಿ ಕೆಜಿಗೆ 100 ರೂ.ವರೆಗೂ ತಲುಪಿದ್ದ ದರ ನಂತರ 125 ರೂ.ಗೆ ಈಗ 150 ರೂ.ಗೆ ಏರಿಕೆಯಾಗಿದೆ. ಟೊಮೆಟೊ ಮಾತ್ರವಲ್ಲ, ಬಹುತೇಕ ಎಲ್ಲ ತರಕಾರಿಗಳ ದರ ಕೂಡ ಏರಿಕೆಯಾಗಿದೆ. ತರಕಾರಿ ದರ 50 ರಿಂದ 80 ರೂ.ವರೆಗೆ ಇದ್ದು, ಸೊಪ್ಪಿನ ದರ ಹೆಚ್ಚಳವಾಗಿದೆ. ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನರಿಗೆ ತರಕಾರಿ ಬೆಲೆ ಭಾರಿ ಏರಿಕೆಯಾಗುತ್ತಿರುವುದು ಗ್ರಾಹಕರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.