ನವದೆಹಲಿ: ಟೊಮೆಟೊ ದರ ಗಗನಕ್ಕೇರಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಈ ಹಿನ್ನೆಲೆಯಲ್ಲಿ ಬೆಲೆ ನಿಯಂತ್ರಣಕ್ಕೆ ಸರ್ಕಾರ ಕ್ರಮ ಕೈಗೊಂಡಿದೆ.
ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಸಹಕಾರಿ ಗ್ರಾಹಕರ ಮಹಾ ಒಕ್ಕೂಟ(NCCF) ಸಬ್ಸಿಡಿ ದರದಲ್ಲಿ ಟೊಮೆಟೊ ಮಾರಾಟ ಮಾಡಲಿದೆ. ದೆಹಲಿಯ ವಿವಿಧ ಪ್ರದೇಶಗಳಲ್ಲಿ ಎನ್‌ಸಿಸಿಎಫ್ ನ ರಿಟೇಲ್ ಸ್ಟೋರ್ ಮತ್ತು ಮೊಬೈಲ್ ವಾಹನಗಳ ಮೂಲಕ ಟೊಮೆಟೊ ಮಾರಾಟ ಮಾಡಲಾಗುವುದು.
ಕೆಜಿಗೆ 60 ರೂಪಾಯಿ ದರದಲ್ಲಿ ಟೊಮೆಟೊ ಮಾರಾಟ ಮಾಡಲಿದ್ದು, ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಚಾಲನೆ ನೀಡಿದ್ದಾರೆ. ದೇಶದ ಹಲವು ಕಡೆ ಟೊಮೆಟೊ ದರ ಕೆಜಿಗೆ 70 ರೂಪಾಯಿಗಿಂತಲೂ ಅಧಿಕವಾಗಿದೆ. ದೆಹಲಿಯ ಹಲವು ಕಡೆ 120 ರೂ.ವರೆಗೂ ಏರಿಕೆಯಾಗಿದ್ದು, ಗ್ರಾಹಕರಿಗೆ ನುಂಗಲಾರದ ತುತ್ತಾಗಿದೆ. ಹೀಗಾಗಿ ಬೆಲೆ ನಿಯಂತ್ರಣ ಉದ್ದೇಶದಿಂದ ಕೇಂದ್ರ ಸರ್ಕಾರ 60 ರೂ. ದರದಲ್ಲಿ ಟೊಮೆಟೊ ಮಾರಾಟ ಮಾಡಲಿದೆ. ಈ ಹಿಂದೆ ಈರುಳ್ಳಿ ದರ ಏರಿಕೆಯಾದ ಸಂದರ್ಭದಲ್ಲಿಯೂ ಇದೇ ರೀತಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು.