ಬೆಂಗಳೂರು: ಗಗನಕ್ಕೇರಿದ್ದ ಟೊಮೆಟೊ ದರ ಭಾರಿ ಕುಸಿತ ಕಂಡಿದೆ. ಇದರಿಂದ ಗ್ರಾಹಕರು ಖುಷಿಯಾಗಿದ್ದರೆ ಬೆಳೆಗಾರರು ಕಂಗಾಲಾಗಿದ್ದಾರೆ.
ಕೆಜಿಗೆ 150 ರೂ.ಗಿಂತಲೂ ಹೆಚ್ಚಾಗಿದ್ದ ಟೊಮೆಟೊ ದರ ಈಗ 5 ರೂ. ಗಿಂತಲೂ ಕಡಿಮೆಯಾಗಿದೆ. ದರ ಏರಿಕೆಯಾಗಿದ್ದರಿಂದ ಭಾರಿ ಪ್ರಮಾಣದಲ್ಲಿ ಟೊಮೆಟೊ ಬೆಳೆದ ರೈತರು ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿದ್ದರು. ಆದರೆ ಬೆಲೆ ಪಾತಾಳಕ್ಕೆ ಕುಸಿದ ಕಾರಣ ಕಂಗಾಲಾಗಿದ್ದಾರೆ.
ತಿಂಗಳ ಹಿಂದೆಯಷ್ಟೇ ಟೊಮೆಟೊಗೆ ಬಂಪರ್ ಬೆಲೆ ಬಂದ ಕಾರಣ ಕಳ್ಳರು ತೋಟಗಳಿಗೆ ನುಗ್ಗಿ ಟೊಮೆಟೊ ಕಳವು ಮಾಡುತ್ತಿದ್ದರು. ರೈತರು ಸಿಸಿ ಕ್ಯಾಮೆರಾ ಅಳವಡಿಸಿದ್ದರು. ಕೆಲವು ರೈತರು ಭರ್ಜರಿ ಲಾಭ ಗಳಿಸಿದ್ದರು.
ನಂತರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೈತರು ಟೊಮೆಟೊ ಬೆಳೆದ ಹಿನ್ನೆಲೆಯಲ್ಲಿ ಬೆಲೆ ಕುಸಿತ ಕಂಡಿದೆ. ಪ್ರಸ್ತುತ ಟೊಮೆಟೊ ದರ 5 -10 ರೂ. ಇದ್ದು, ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ. ಟೊಮೆಟೊ ಕೀಳಲು ಬರುವ ಕೂಲಿ ಕಾರ್ಮಿಕರಿಗೆ 300 ರಿಂದ 400 ರೂ. ಕೊಡಬೇಕು. ಒಂದು ಬಾಕ್ಸ್ ಲಗೇಜ್ ಗೆ 15 ರಿಂದ 20 ರೂಪಾಯಿ ಕೊಡಬೇಕು. ದಲ್ಲಾಳಿಗಳಿಗೆ ಕಮಿಷನ್ ಕೊಡಬೇಕು. ಇದರಿಂದಾಗಿ ಹಾಕಿದ ಬಂಡವಾಳ ವಾಪಸ್ ಬರದಂತಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಾರುಕಟ್ಟೆಗೆ ಬಾರಿ ಪ್ರಮಾಣದಲ್ಲಿ ಟೊಮೆಟೊ ಬರುತ್ತಿರುವುದರಿಂದ ಕೇಳುವವರೇ ಇಲ್ಲದಂತಾಗಿದೆ.