ಭಾರತದ ಜನಸಂಖ್ಯೆಯಲ್ಲಿ ಕೇವಲ 4.4 ಪ್ರತಿಶತ ಪಾಲನ್ನ ಹೊಂದಿರುವ ದೇಶದ ಎರಡು ರಾಜ್ಯಗಳು ಟೋಕಿಯೋ ಒಲಿಂಪಿಕ್ಗೆ ಒಟ್ಟು 50 ಕ್ರೀಡಾಪಟುಗಳನ್ನ ಕಳುಹಿಸುವ ಮೂಲಕ ಸಾಧನೆ ಮಾಡಿವೆ. ಹರಿಯಾಣ ರಾಜ್ಯದಿಂದ 31 ಕ್ರೀಡಾಪಟುಗಳು ಹಾಗೂ ಪಂಜಾಬ್ನಿಂದ 19 ಕ್ರೀಡಾಪಟುಗಳು ಟೋಕಿಯೋ ಒಲಿಂಪಿಕ್ಗೆ ಆಯ್ಕೆಯಾಗಿದ್ದಾರೆ.
ಮೂರನೇ ಸ್ಥಾನದಲ್ಲಿ ತಮಿಳುನಾಡು ಇದ್ದು 11 ಆಟಗಾರರನ್ನ ಟೋಕಿಯೋಗೆ ಕಳುಹಿಸಿದೆ. ಇನ್ನು ತಲಾ 8 ಆಟಗಾರರನ್ನ ಕಳುಹಿಸುವ ಮೂಲಕ ಕೇರಳ ಹಾಗೂ ಉತ್ತರ ಪ್ರದೇಶ ರಾಜ್ಯಗಳು ಟಾಪ್ 5 ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಭಾರತೀಯ ಜನಸಂಖ್ಯೆಯಲ್ಲಿ ಉತ್ತರ ಪ್ರದೇಶ 17 ಪ್ರತಿಶತ ಪಾಲನ್ನ ಹೊಂದಿದ್ದರೆ ಒಲಿಂಪಿಕ್ ಆಟಗಾರರ ಪಟ್ಟಿಯಲ್ಲಿ 6.3 ಪ್ರತಿಶತ ಪಾಲನ್ನು ಹೊಂದಿದೆ. ಇನ್ನು ದೇಶದ ಜನಸಂಖ್ಯೆಯಲ್ಲಿ 2.6 ಪ್ರತಿಶತ ಪಾಲನ್ನ ಹೊಂದಿರುವ ಕೇರಳ ಒಲಿಂಪಿಕ್ ಆಟಗಾರರ ಪಟ್ಟಿಯಲ್ಲಿ 6.3 ಪ್ರತಿಶತ ಕೊಡುಗೆ ನೀಡಿದೆ.
ಹರಿಯಾಣದಿಂದ 9 ಮಹಿಳಾ ಹಾಕಿ ಆಟಗಾರರು, 7 ಮಂದಿ ಕುಸ್ತಿ ಪಟುಗಳು, 4 ಬಾಕ್ಸರ್ಸ್ ಹಾಗೂ ನಾಲ್ವರು ಶೂಟರ್ಗಳು ಟೊಕಿಯೋ ಒಲಿಂಪಿಕ್ಸ್ಗೆ ಆಯ್ಕೆಯಾಗಿದ್ದಾರೆ.
ಪಂಜಾಬ್ ರಾಜ್ಯದಿಂದ 11 ಮಂದಿ ಹಾಕಿ ಆಟಗಾರರು ಟೋಕಿಯೋ ಟಿಕೆಟ್ ಪಡೆದಿದ್ದಾರೆ. ಇಬ್ಬರು ಶೂಟರ್ಸ್, ನಾಲ್ಕು ಓಟಗಾರರು, ಇಬ್ಬರು ಮಹಿಳಾ ಹಾಕಿ ಆಟಗಾರ್ತಿಯರು ಹಾಗೂ ಒರ್ವ ಬಾಕ್ಸರ್ ಒಲಿಂಪಿಕ್ ರೇಸ್ನಲ್ಲಿ ಭಾರತವನ್ನ ಪ್ರತಿನಿಧಿಸಿದ್ದಾರೆ.
ತಮಿಳುನಾಡಿನಿಂದ ಐವರು ಅಥ್ಲೆಟಿಕ್ಸ್, ಮೂವರು ಸೈಲಿಂಗ್, ಇಬ್ಬರು ಟೆನ್ನಿಸ್ ಆಟಗಾರರು ಹಾಗೂ ಓರ್ವ ಫೆನ್ಸಿಂಗ್ ಕ್ರೀಡಾಳು ಇದ್ದಾರೆ.
ಅಥ್ಲೆಟಿಕ್ಸ್ ಪರಂಪರೆಯನ್ನ ಮುಂದುವರಿಸಿರುವ ಕೇರಳ ಆರು ಮಂದಿ ಟ್ರ್ಯಾಕ್ & ಫೀಲ್ಡ್ ಹಾಗೂ ಸ್ವಿಮ್ಮಿಂಗ್, ಹಾಕಿ ಪುರುಷರ ತಂಡಕ್ಕೆ ಓರ್ವ ಆಟಗಾರರನ್ನ ಕಳುಹಿಸಿಕೊಟ್ಟಿದೆ.