ಹಾಕಿ ಭಾರತದ ರಾಷ್ಟ್ರೀಯ ಕ್ರೀಡೆ ಆಗಿದ್ದರೂ ಸಹ ಹಾಕಿಯ ತವರೂರು ಅಂದ ಕೂಡಲೇ ನೆನಪಾಗೋದೇ ನಮ್ಮ ರಾಜ್ಯದ ಕೊಡಗು. ಈ ಬಾರಿಯ ಟೋಕಿಯೋ ಒಲಿಂಪಿಕ್ನಲ್ಲೂ ಸಹ ಚಿನ್ನದ ಪದಕವನ್ನ ಬಾಚಲು ಭಾರತದ ಆಟಗಾರರು ರೆಡಿಯಾಗಿದ್ದಾರೆ. ಆದರೆ ಈ ಬಾರಿಯ ಒಲಿಂಪಿಕ್ ಹಾಕಿ ತಂಡದಲ್ಲಿ ಯಾವೊಬ್ಬ ಕನ್ನಡಿಗನಿಗೂ ಸ್ಥಾನ ನೀಡದೇ ಇರೋದು ರಾಜ್ಯದ ಜನತೆಗೆ ನೋವುಂಟು ಮಾಡಿದೆ.
ಈವರೆಗೆ ಕೊಡಗಿನಿಂದ 13 ಆಟಗಾರರು ಒಲಿಂಪಿಕ್ಸ್ನ ಹಾಕಿ ಪಂದ್ಯಾವಳಿಯಲ್ಲಿ ಭಾರತವನ್ನ ಪ್ರತಿನಿಧಿಸಿದ್ದಾರೆ. ಕಳೆದ ಬಾರಿ ಅಂದರೆ 2016ರಲ್ಲಿ ನಡೆದಿದ್ದ ರಿಯೋ ಒಲಿಂಪಿಕ್ಸ್ನಲ್ಲೂ ಸಹ ಭಾರತದ ಹಾಕಿ ತಂಡದಲ್ಲಿ ಕನ್ನಡಿಗರಾದ ನಿಕ್ಕಿನ್ ತಿಮ್ಮಯ್ಯ, ವಿ.ಆರ್. ರಘುನಾಥ್, ಎಸ್ವಿ ಸುನೀಲ್ ಹಾಗೂ ಎಸ್ಕೆ ಉತ್ತಪ್ಪ ಸ್ಥಾನ ಪಡೆದಿದ್ದರು. ದಶಕಗಳಿಂದ ಕನ್ನಡಿಗರಿಗೆ ಹಾಕಿ ತಂಡದಲ್ಲಿ ಸಿಗುತ್ತಿದ್ದ ಸ್ಥಾನ ಈ ಬಾರಿ ಮಿಸ್ ಆಗಿರೋದು ಕರ್ನಾಟಕದ ಜನತೆಗೆ ಅದರಲ್ಲೂ ವಿಶೇಷವಾಗಿ ಕೊಡವರ ಬೇಸರಕ್ಕೆ ಕಾರಣವಾಗಿದೆ.
1980ರಲ್ಲಿ ಮಾಸ್ಕೋದಲ್ಲಿ ನಡೆದ ಒಲಿಂಪಿಕ್ಸ್ನಲ್ಲಿ ಭಾರತದ ಹಾಕಿ ತಂಡ ಚಿನ್ನದ ಪದಕವನ್ನ ಸಂಪಾದಿಸಿತ್ತು. ಈ ತಂಡದಲ್ಲಿದ್ದ ಎಂ.ಎಂ. ಸೋಮಯ್ಯ ಕೊಡಗಿನವರಾಗಿದ್ದರು. ಅಷ್ಟೇ ಏಕೆ 1972ರಲ್ಲಿ ಮ್ಯೂನಿಕ್ ಒಲಿಂಪಿಕ್ಸ್ನಲ್ಲಿ ಭಾರತದ ಹಾಕಿ ತಂಡ ಕಂಚಿನ ಪದಕ ಗಳಿಸುವಲ್ಲಿ ಬಿ.ಪಿ. ಗೋವಿಂದ ಹಾಗೂ ಎಂ.ಪಿ. ಗಣೇಶ್ ಪ್ರಮುಖ ಪಾತ್ರ ವಹಿಸಿದ್ದರು.