ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಮೊಟ್ಟ ಮೊದಲ ಪದಕ ತಂದುಕೊಟ್ಟ ಸಾಯಿಕೋಮ್ ಮೀರಾಬಾಯಿ ಚಾನುಗೆ ಚಿನ್ನದ ಪದಕ ಸಂಪಾದಿಸಲು ಇನ್ನೂ ಒಂದು ಅವಕಾಶ ಸಿಕ್ಕಿದೆ. 49 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಚೀನಾದ ಆಟಗಾರ್ತಿ ಜಿಹುಇ ಹೋಗೆ ಶನಿವಾರ ಡೋಪಿಂಗ್ ಟೆಸ್ಟ್ ನಡೆಸಲಾಗಿದೆ. ಈ ಟೆಸ್ಟ್ನಲ್ಲಿ ಜಹುಇ ಅನುತ್ತೀರ್ಣರಾದಲ್ಲಿ ಮೀರಾಬಾಯಿ ಚಾನು ಮೊದಲ ಸ್ಥಾನಕ್ಕೆ ಏರಲಿದ್ದಾರೆ. ಇದರ ಅರ್ಥ ಅವರಿಗೆ ಬೆಳ್ಳಿ ಪದಕದ ಬದಲು ಚಿನ್ನದ ಪದಕ ಸಿಗಲಿದೆ.
ಚೀನಾದ ಆಟಗಾರ್ತಿ ಜಿಹುಇ ಹೋ 210 ಕೆಜಿ ತೂಕವನ್ನ ಎತ್ತುವ ಮೂಲಕ ಚಿನ್ನದ ಪದಕವನ್ನು ಸಂಪಾದಿಸಿದ್ದರು. ಈ ಮೂಲಕ ಒಲಿಂಪಿಕ್ನಲ್ಲಿ ಹೊಸ ರೆಕಾರ್ಡ್ನ್ನೂ ಮಾಡಿದ್ದರು. ಆದರೆ ಇದಾದ ಬಳಿಕ ಜಿಹುಇ ಮೇಲೆ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಅವರನ್ನ ಡೋಪಿಂಗ್ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪರೀಕ್ಷೆಯಲ್ಲಿ ಜಿಹೋಇ ಫೇಲ್ ಆದಲ್ಲಿ ಬೆಳ್ಳಿ ಪದಕ ವಿಜೇತ ಮೀರಾಬಾಯಿ ಚಿನ್ನದ ಪದಕವನ್ನ ಸಂಪಾದಿಸಲಿದ್ದಾರೆ. ಹಾಗೂ ಈ ಸ್ಪರ್ಧೆಯಲ್ಲಿ ಕಂಚಿನ ಪದಕ ಸಂಪಾದಿಸಿದ್ದ ಇಂಡೋನೇಷಿಯಾದ ಆಟಗಾರ್ತಿ ವಿಂಡಿ ಕೆಂಟಿಗೆ ರಜತ ಪದಕವನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ.
ಅಂದಹಾಗೆ ಈ ವಿಚಾರದಲ್ಲಿ ಡಬ್ಲುಎಡಿಎ( ವಿಶ್ವ ಉದ್ದೀಪನ ನಿಗ್ರಹ ಘಟಕ) ಈವರೆಗೂ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಅಲ್ಲದೇ ಸ್ಪರ್ಧೆ ಮುಗಿದ ಬಳಿಕ ಭಾಗವಹಿಸಿದ ಪ್ರತಿಯೊಬ್ಬ ಸ್ಪರ್ಧಾಳುವಿಗೆ ಡೋಪಿಂಗ್ ಟೆಸ್ಟ್ ನಡೆಸಲಾಗುತ್ತದೆ ಅನ್ನೋದನ್ನ ನಾವಿಲ್ಲಿ ಗಮನಿಸಬೇಕು.
ಒಂದು ವೇಳೆ ಮೀರಾಬಾಯಿ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾದಲ್ಲಿ ಒಲಿಂಪಿಕ್ನಲ್ಲಿ ಸ್ವರ್ಣ ಪದಕ ಪಡೆದ ಮೊದಲ ಹಾಗೂ ವೇಟ್ಲಿಫ್ಟಿಂಗ್ನಲ್ಲಿ ಚಿನ್ನದ ಹುಡುಗಿ ಎನಿಸಿಕೊಂಡ ಮೊದಲ ಆಟಗಾರ್ತಿ ಇವರಾಗಲಿದ್ದಾರೆ.