ಮನೆಯಲ್ಲಿ ಕುಕ್ಕರ್ ಇಲ್ಲದೆ ಹೋದರೆ ಅಡುಗೆ ಮಾಡುವುದೇ ಅಸಾಧ್ಯ ಎನ್ನುವಷ್ಟು ಈಗ ಮಹಿಳೆಯರು ಕುಕ್ಕರ್ ಅನ್ನು ನಂಬಿದ್ದಾರೆ. ಬೆಳಗಿನ ಧಾವಂತಕ್ಕೆ ಸರಿಯಾದ ಸಮಯದಲ್ಲಿ ಅಡುಗೆ ತಯಾರಾಗಬೇಕು ಅಂದರೆ ಅದರಲ್ಲಿ ಪ್ರೆಷರ್ ಕುಕ್ಕರ್ ನ ಪಾತ್ರ ಬಹಳ ದೊಡ್ಡದು. ಸರಿಯಾದ ಸಮಯದಲ್ಲಿ ಕುಕ್ಕರ್ ಕೈ ಕೊಟ್ಟರೆ ಅಡುಗೆಯ ಕಥೆ ಅಲ್ಲಿಗೆ ಮುಗಿಯಿತು ಎಂದೇ ಅರ್ಥ.
ಕುಕ್ಕರ್ ಅನ್ನು ಇಷ್ಟೊಂದು ಅವಲಂಬಿಸಿರುವ ನಾವು ಅದರ ಸರಿಯಾದ ನಿರ್ವಹಣೆಯ ಬಗ್ಗೆಯೂ ಕಾಳಜಿ ವಹಿಸಬೇಕು. ಪ್ರೆಷರ್ ಕುಕ್ಕರ್ ನ ಮುಖ್ಯವಾದ ಬಿಡಿ ಭಾಗಗಳೂ ಗ್ಯಾಸ್ಕೆಟ್ ಸಹಾ ಒಂದು. ಗ್ಯಾಸ್ಕೆಟ್ ಸರಿಯಾಗಿ ಇಲ್ಲದೆ ಹೋದರೆ ಯಾವುದೇ ಪದಾರ್ಥ ಸರಿಯಾಗಿ ಬೇಯುವುದೇ ಇಲ್ಲ.
ಗ್ಯಾಸ್ಕೆಟ್ ನ ಕೆಲಸ ಅಂದರೆ ಕುಕ್ಕರ್ ನ ಒಳಗೆ ಪ್ರೆಷರ್ ಅಂದರೆ ಒತ್ತಡವನ್ನು ಹಿಡಿದಿಡುವುದು. ಒತ್ತಡ ಸಮರ್ಪಕವಾಗಿದ್ದರೆ ಅಡುಗೆಯೂ ಶೀಘ್ರವಾಗಿ ಬೇಯುತ್ತದೆ. ಕೆಲವೊಮ್ಮೆ ಕುಕ್ಕರ್ ಗ್ಯಾಸ್ಕೆಟ್ ಹಳೆಯದಾಗಿ ಸಡಿಲವಾಗಬಹುದು. ಆಗ ಗಾಳಿಯು ಹೊರಗೆ ಹೋಗಿ ಒತ್ತಡ ಉಂಟಾಗುವುದೇ ಇಲ್ಲ.
ಗ್ಯಾಸ್ಕೆಟ್ ಬಗ್ಗೆ ಗಮನದಲ್ಲಿ ಇಡಬೇಕಾದ ಕೆಲವು ಮುಖ್ಯ ವಿಷಯಗಳಿವೆ
ಪ್ರತಿ ಒಂದು ಅಥವಾ ಒಂದೂವರೆ ವರ್ಷಕ್ಕೊಮ್ಮೆ ಆದರೂ ಗ್ಯಾಸ್ಕೆಟ್ ಬದಲಾಯಿಸಿ.
ಗ್ಯಾಸ್ಕೆಟ್ ಎಂಬುದು ರಬ್ಬರ್ ನಿಂದ ಮಾಡಿದ ಉತ್ಪನ್ನ. ಹೆಚ್ಚು ಶಾಖಕ್ಕೆ ಅದನ್ನು ಒಡ್ಡಿದಷ್ಟೂ ಬೇಗ ಹಾಳಾಗಬಹದು. ದೀರ್ಘಕಾಲದವರೆಗೆ ಗ್ಯಾಸ್ಕೆಟ್ ಬಾಳಿಕೆ ಬರಬೇಕಾದರೆ ಒಲೆಯ ಉರಿ ಮಧ್ಯಮವಾಗಿ ಇರಲಿ. ಹೆಚ್ಚು ಉರಿಯಿಂದ ರಬ್ಬರ್ ಹಿಗ್ಗಬಹುದು.
ಒಂದು ವೇಳೆ ಹೊಸದಾಗಿ ತಂದ ಗ್ಯಾಸ್ಕೆಟ್ ತುಂಬಾ ಜಡವಾಗಿದ್ದರೆ ಅದನ್ನು ಸ್ವಲ್ಪ ಹೊತ್ತು ಬಿಸಿನೀರಿನಲ್ಲಿ ಹಾಕಿಡಿ.
ಕುಕ್ಕರ್ ಬಳಸಿದ ನಂತರ ಆಗಾಗ ಅಂದರೆ ವಾರಕ್ಕೆ 3-4 ದಿನವಾದರೂ ಗ್ಯಾಸ್ಕೆಟ್ ಅನ್ನು ತಣ್ಣನೆಯ ನೀರಿನಲ್ಲಿ ಮುಳುಗಿಸಿ. ಇದರಿಂದ ಗ್ಯಾಸ್ಕೆಟ್ ರಬ್ಬರ್ ಬೇಗ ಹಿಗ್ಗದೆ ದೀರ್ಘ ಕಾಲ ಬಾಳಿಕೆ ಬರುತ್ತದೆ.