17 ವರ್ಷದ ಅರುಣ್ ಕುಮಾರ್‌ಗೆ ಗೊತ್ತಿದ್ದುದು ಕೇವಲ ಚೆನ್ನಾಗಿ ಓದಬೇಕು. ಕಷ್ಟದ ಕೆಲಸಗಳನ್ನು ಮಾಡಿ ಜೀವನ ಸಾಗಿಸುವ ತಂದೆಗೆ ಖುಷಿಪಡಿಸಬೇಕು ಎನ್ನುವುದು ಮಾತ್ರವೇ. ಆತನಿಗೆ ದೇಶದ ಪ್ರತಿಷ್ಠಿತ ‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ‘ ಹಾಗೂ ಅದಕ್ಕೆ ಆಯ್ಕೆಯಾಗಿ ಮಹೋನ್ನತ ಸಾಧನೆಗಳಿಗೆ ಮುಂದಾಗುವ ಕಲ್ಪನೆ ಕೂಡ ಇರಲಿಲ್ಲ.
ಶಾಲಾ ಆಡಳಿತ ಮಂಡಳಿಯು ಜೆಇಇ ಪ್ರವೇಶ ಪರೀಕ್ಷೆಯ ತರಬೇತಿ ನೀಡುವ ಸೆಂಟರ್‌ವೊಂದರ ಪರೀಕ್ಷೆಗೆ ಹಾಜರಾಗಲು ಒತ್ತಾಯಿಸಿತು. ಅದರಂತೆ ತರಬೇತಿಗೆ ಆಯ್ಕೆಯಾದ ಅರುಣ್ , ಮೊದಲ ಯತ್ನದಲ್ಲೇ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾನೆ. ತಿರುಚ್ಚಿ ಪಟ್ಟಣದ ಮನೆಮಾತಾಗಿದ್ದಾನೆ.
ವಿಶೇಷವೆಂದರೆ ಅರುಣ್ ತನ್ನ ತರಬೇತಿ ಪೂರ್ಣಗೊಳಿಸಿದ್ದು ಆನ್‌ಲೈನ್ ಮೂಲಕ. ಯಾಕೆಂದರೆ ಕೊರೊನಾ ಸಾಂಕ್ರಾಮಿಕದಿಂದಾಗಿ ಭೌತಿಕ ತರಬೇತಿ ತರಗತಿಗಳು ನಡೆದಿರಲಿಲ್ಲ. ಕೂಲಿ ಕಾರ್ಮಿಕರಾಗಿರುವ ಅರುಣ್‌ನ ತಂದೆಯು ಬಹಳ ಕಷ್ಟಪಟ್ಟು ಆನ್‌ಲೈನ್ ತರಗತಿಗಾಗಿ ಸ್ಮಾರ್ಟ್‌ಫೋನ್‌ವೊಂದನ್ನು ಮಾಸಿಕ ಕಂತಿನ ಮೇಲೆ ಕೊಂಡುಕೊಟ್ಟಿದ್ದಾರೆ.
ಅದರ ಇಎಂಐಯನ್ನು ಅವರು ಇನ್ನೂ ಕಟ್ಟುತ್ತಲೇ ಇದ್ದಾರೆ, ಆದರೆ ಅವರ ಮಗ ಮಾತ್ರ ಶೀಘ್ರದಲ್ಲೇ ಪ್ರತಿಷ್ಠಿತ ಐಐಟಿಯಲ್ಲಿ ಉತ್ತಮವಾದ ಕೋರ್ಸ್‌ಗೆ ಸೇರ್ಪಡೆಯಾಗಲಿದ್ದಾನೆ.
ಈ ಬಗ್ಗೆ ಅರುಣ್‌ನ ತಂದೆ ಪೊನ್ನಾಲಗನ್ ಅವರು ಬಹಳ ಹರ್ಷ ವ್ಯಕ್ತಪಡಿಸುತ್ತಾರೆ. ಬಡತನ ಹಾಗೂ ಖಾಸಗಿ ಶಾಲೆಗಳ ಯದ್ವಾತದ್ವಾ ಶುಲ್ಕಕ್ಕೆ ಹೆದರಿ ಅರುಣ್ ನನ್ನು ಸರ್ಕಾರಿ ಶಾಲೆಯಲ್ಲೇ ಓದಿಸಿದೆ. ಆದರೂ ಆತ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವುದು ಹೆಮ್ಮೆ ತಂದಿದೆ ಎಂದಿದ್ದಾರೆ.
ಅರುಣ್, ಅಖಿಲ ಭಾರತ 12,175 ನೇ ರ‍್ಯಾಂಕ್ ಮತ್ತು ಒಬಿಸಿ-ಎನ್‌ಸಿಎಲ್ ವರ್ಗದಲ್ಲಿ 2,503ನೇ ರ‍್ಯಾಂಕ್ ಪಡೆದಿದ್ದಾನೆ. ಕಳೆದ ವರ್ಷದ ಐಐಟಿ ಸೀಟು ಹಂಚಿಕೆ ಹೋಲಿಕೆಯಂತೆ ಈ ರ‍್ಯಾಂಕ್ ಗೆ ಉತ್ತಮ ಕೋರ್ಸ್ ಸಿಗುವುದು ಪಕ್ಕಾ ಆಗಿದೆ. ಆದರೆ ನಾಲ್ಕು ವರ್ಷಗಳ ಐಐಟಿ ಕೋರ್ಸ್ ಶುಲ್ಕವನ್ನು ಅರುಣ್ ಕುಟುಂಬಸ್ಥರು ಹೇಗೆ ಭರಿಸುತ್ತಾರೆ ಎನ್ನುವುದೇ ದೊಡ್ಡ ಸವಾಲಾಗಿದೆ. ಯಾಕೆಂದರೆ ಅವರ ಮಾಸಿಕ ಆದಾಯ 10 ಸಾವಿರ ರೂ. ದಾಟುವುದು ಕೂಡ ಬಹಳ ಕಷ್ಟಸಾಧ್ಯವಂತೆ.