
ತಾಲಿಬಾನ್ ಆಳ್ವಿಕೆಯಿಂದ ತಪ್ಪಿಸಿಕೊಳ್ಳಲು ಪರದಾಡುತ್ತಿರುವ ಅಫ್ಘನ್ನರು ದೇಶದಿಂದ ಪಲಾಯನ ಮಾಡಲು ಯತ್ನಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ತಾಲಿಬಾನ್ ಸರ್ವಾಧಿಕಾರದಿಂದ ತಪ್ಪಿಸಿಕೊಳ್ಳಲು ಬಿಸಿಲಿನ ಬೇಗೆಯನ್ನೂ ಲೆಕ್ಕಿಸದೇ ಅಫ್ಘನ್ನರು ಸ್ಪಿನ್ ಬೋಲ್ಡಾಕ್ ಗಡಿಯ ಇಕ್ಕಟ್ಟಿನ ಜಾಗದಲ್ಲಿ ಕುಳಿತಿರೋದನ್ನು ಕಾಣಬಹುದಾಗಿದೆ.
ಸ್ಥಳೀಯ ಮಾಧ್ಯಮಗಳು ನೀಡಿರುವ ವರದಿಯ ಪ್ರಕಾರ ತಾಲಿಬಾನಿಗಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಇಲ್ಲಿ ಕಾಲ್ತುಳಿತ ಕೂಡ ಸಂಭವಿಸಿದೆ ಎನ್ನಲಾಗಿದೆ.
ಟ್ವಿಟರ್ ಬಳಕೆದಾರ ಹಾಗೂ ಪತ್ರಕರ್ತ ನಾತಿಕ್ ಮಜಿಕ್ಜಾಡಾ ಎಂಬವರು ಈ ವೈರಲ್ ವಿಡಿಯೋವನ್ನು ಶೇರ್ ಮಾಡಿದ್ದಾರೆ, ಇದು ಕಾಬೂಲ್ ವಿಮಾನ ನಿಲ್ದಾಣ ಬಳಿಯ ದೃಶ್ಯವಲ್ಲ, ಸ್ಪಿನ್ ಬೋಲ್ಡಕ್ ಗಡಿಯಲ್ಲಿ ಸಾವಿರಕ್ಕೂ ಅಧಿಕ ಜನರು ಪಾಕಿಸ್ತಾನದ ಕಡೆಗೆ ತೆರಳಲು ಬಯಸುತ್ತಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣಕ್ಕಿಂತಲೂ ಇಲ್ಲಿನ ಪರಿಸ್ಥಿತಿ ಇನ್ನೂ ದಯನೀಯವಾಗಿದೆ. ಇಲ್ಲಿ ಯಾವುದೇ ಸೇನೆ ಇಲ್ಲದ ಕಾರಣ ಈ ಸನ್ನಿವೇಶವನ್ನು ಮಾಧ್ಯಮಗಳು ಚಿತ್ರೀಕರಿಸುತ್ತಿಲ್ಲ ಎಂದು ಶೀರ್ಷಿಕೆ ನೀಡಿದ್ದಾರೆ.
ಈ ನಡುವೆ ಪಾಕಿಸ್ತಾನವು ಮುಂಜಾಗ್ರತಾ ಕ್ರಮವಾಗಿ ಗಡಿಯಲ್ಲಿ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಿದೆ.