ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳ ಜಾಹೀರಾತುದಾರರು ಖಾಲಿ ಜಾಗಗಳನ್ನು ತುಂಬುವುದಷ್ಟೇ ಅಲ್ಲ. ಓದುಗರ ಗಮನವನ್ನು ಸೆಳೆಯಲು ವಿಭಿನ್ನ, ವಿಚಿತ್ರ ಪ್ರಯತ್ನಗಳನ್ನ ಮಾಡುತ್ತಿದ್ದಾರೆ. ಅಂತಹ ಒಂದು ಹೊಸ ವಿಭಿನ್ನ ಜಾಹೀರಾತು ಓದುಗರ ಗಮನ ಸೆಳೆಯೋದ್ರ ಜೊತೆಗೆ, ಅದರ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ಕೋಲ್ಕತ್ತಾದ ಶೇರ್ವಾನಿ ಮಾರಾಟಗಾರನೊಬ್ಬನ ಪತ್ರಿಕೆಯ ಜಾಹೀರಾತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಆ್ಯಡ್ ವೈರಲ್ ಆಗಿರೋದಾದ್ರು ಏಕೆ ಎಂದು ನೀವು ಕೇಳಬಹುದು ? ಸುಲ್ತಾನ್ ಹೆಸರಿನ ಬಟ್ಟೆ ಬ್ರಾಂಡ್ ತಮ್ಮ ಬಟ್ಟೆಗಳನ್ನು ಪ್ರಚಾರ ಮಾಡಲು ಮಿಸ್ಸಿಂಗ್ ಪೋಸ್ಟ್ ಹಾಕಿದ್ದಾರೆ. ಈ ಚಿತ್ರವನ್ನ ನೋಡಿದಾಕ್ಷಣ ನಿಮಗೆ ಇದು ಶೇರ್ವಾನಿಯ ಜಾಹೀರಾತೊ ಅಥವಾ ಮಿಸ್ಸಿಂಗ್ ಪೋಸ್ಟೊ ಎಂಬ ಗೊಂದಲ ಉಂಟಾಗೋದು ಗ್ಯಾರಂಟಿ. ವ್ಯತ್ಯಾಸ ಗುರುತಿಸಲು, ನೀವು ಕೊನೆಯವರೆಗೂ ಜಾಹೀರಾತನ್ನು ಎಚ್ಚರಿಕೆಯಿಂದ ಓದಬೇಕು.
ಪತ್ರಿಕೆಯಲ್ಲಿ ಪ್ರಿಂಟ್ ಆಗಿದ್ದ ಜಾಹೀರಾತಿನ ಚಿತ್ರವನ್ನು ರೆಡ್ಡಿಟ್ ಯೂಸರ್ ಒಬ್ಬರು ರೆಡ್ಡಿಟ್ ನಲ್ಲಿ ಪೋಸ್ಟ್ ಮಾಡಿದ್ದಾರೆ. “ಎತ್ತರವಾಗಿ ಬೆಳ್ಳಗೆ ಸುಂದರವಾಗಿರೊ ಸುಮಾರು 24 ವರ್ಷದ ನನ್ನ ಪ್ರೀತಿಯ ಮಗ ಮಜ್ನು ಕಾಣೆಯಾಗಿದ್ದಾನೆ. ಮಗನೆ ದಯವಿಟ್ಟು ಮನೆಗೆ ವಾಪಸ್ಸು ಬಾ. ಎಲ್ಲರೂ ತುಂಬಾ ಅಸಮಾಧಾನಗೊಂಡಿದ್ದಾರೆ. ನಾವು ನಿನ್ನ ಎರಡೂ ಬೇಡಿಕೆಗಳನ್ನು ಒಪ್ಪಿಕೊಂಡಿದ್ದೇವೆ. ‘ಲೈಲಾ’ ನಿನ್ನ ವಧು ಆಗಿರುತ್ತಾಳೆ ಹಾಗೇ ನಿನ್ನಿಷ್ಟದ ಸುಲ್ತಾನ್ ಬ್ರ್ಯಾಂಡ್ ನ ಮದುವೆಯ ಶೆರ್ವಾನಿಯನ್ನು ಖರೀದಿಸಿ ಕೊಡುತ್ತೇವೆ. ಸುಲ್ತಾನ್- ದಿ ಕಿಂಗ್ ಆಫ್ ಶೆರ್ವಾನಿ, ಎಂದು ಬರೆಯಲಾಗಿದೆ. ಸಧ್ಯ ಈ ಪೋಸ್ಟ್ ಎಲ್ಲೆಡೆ ವೈರಲ್ ಆಗುತ್ತಿದ್ದು ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.