ನಮ್ಮ ದೇಶದ ಸಂಸ್ಕೃತಿ, ಆಚಾರ –ವಿಚಾರ ಅತ್ಯಂತ ಶ್ರೀಮಂತವಾದುದು. ಬಹುಪಾಲು ಜನರು ದೈವದ ಮೇಲೆ ನಂಬಿಕೆ ಇರುವಂತಹವರಾಗಿದ್ದಾರೆ. ಈ ದೇವರ ಮೇಲಿನ ನಂಬಿಕೆಯಿಂದಲೇ ಬಾಗಿಲೇ ಇರದ ಮನೆಗಳನ್ನು ನಾವು ಮಹಾರಾಷ್ಟ್ರದ ಗ್ರಾಮವೊಂದನ್ನು ನೋಡಿದ್ದೇವೆ.
ಮತ್ತೊಂದೆಡೆ, ತಮಿಳುನಾಡು ಗ್ರಾಮವೊಂದರಲ್ಲಿ ಯಾರೊಬ್ಬರೂ ಪಾದರಕ್ಷೆಗಳನ್ನು ಧರಿಸುವುದೇ ಇಲ್ಲವಂತೆ ! ಹೌದು. ಇದು ಆಶ್ಚರ್ಯವಾದರೂ ನಂಬಲೇಬೇಕಾದ ವಿಚಾರವಾಗಿದೆ.
ಮನೆಯೆಂದರೆ ಲಕ್ಷ್ಮಿ ಇದ್ದಂತೆ. ಈ ಕಾರಣದಿಂದಲೇ ಅನೇಕ ಜನರು ಪಾದರಕ್ಷೆ ಧರಿಸಿ ಮನೆಯೊಳಗಾಗಲೀ ಅಥವಾ ದೇವಾಲಯಗಳಿಗಾಗಲೀ ಹೋಗುವುದಿಲ್ಲ. ಅದೇ ರೀತಿ ತಮಿಳುನಾಡಿನ ಅರಣ್ಯಕ್ಕೆ ಹೊಂದಿಕೊಂಡಿರುವಂತೆ ವೆಲ್ಲಾಗವಿ ಎಂಬ ಗ್ರಾಮವಿದೆ. ಒಂದು ವೇಳೆ ಈ ಗ್ರಾಮದಲ್ಲಿ ಯಾರಾದರೂ ಪಾದರಕ್ಷೆ ಧರಿಸಿದರೆ ಅವರಿಗೆ ಶಿಕ್ಷೆ ವಿಧಿಸಲಾಗುತ್ತದೆ. ಅಂದಹಾಗೆ ಸುಮಾರು ನೂರು ಕುಟುಂಬಗಳು ವಾಸಿಸುತ್ತಿರುವ ಈ ಗ್ರಾಮಕ್ಕೆ ಯಾವುದೇ ಸಂಪರ್ಕ ರಸ್ತೆ ಇಲ್ಲ. ನೆರೆಯೂರಿಗೆ ಹೋಗಬೇಕಾದರೆ ಅವರು ಸಾಹಸದಿಂದ ಟ್ರೆಕ್ ಮಾಡಿ ನಡೆದುಕೊಂಡೇ ಹೋಗಬೇಕು.
ನಿರ್ವಸತಿಗ ಬಾಲಕನೆಡೆಗೆ ಮಹಿಳೆ ತೋರಿದ ʼಹೃದಯವಂತಿಕೆʼ ವಿಡಿಯೋ ವೈರಲ್
ಊರ ಪ್ರವೇಶದ್ವಾರದಲ್ಲಿ ಒಂದು ದೊಡ್ಡ ಮರವಿದೆ. ಅದು ಗ್ರಾಮಸ್ಥರ ಆರಾಧ್ಯ ದೈವವಾಗಿದೆ. ಈ ಕಾರಣದಿಂದಲೇ ಇಲ್ಲಿಂದ ಗ್ರಾಮದೊಳಗೆ ಪಾದರಕ್ಷೆಯನ್ನು ಧರಿಸುವುದನ್ನು ನಿಷೇಧಿಸಲಾಗಿದೆ.
ತಮ್ಮ ಗ್ರಾಮವು ದೇವರ ಗ್ರಾಮವಾಗಿದೆ ಎಂದು ನಂಬಿರುವ ಇಲ್ಲಿನ ಜನರು ಈ ಕಾರಣದಿಂದಲೇ ಪಾದರಕ್ಷೆಯನ್ನು ಧರಿಸುವುದಿಲ್ಲವಂತೆ. ಒಂದು ವೇಳೆ ಯಾರಾದರೂ ಪಾದರಕ್ಷೆಗಳನ್ನು ಧರಿಸಿದರೆ ದೇವರು ಸಿಟ್ಟಿಗೇಳುತ್ತಾರೆ ಎಂಬ ನಂಬಿಕೆ ಇವರದ್ದಾಗಿದೆ.
ಹೀಗಾಗಿ ಯಾರೂ ಸಹ ಶೂ ಆಗಲೀ ಅಥವಾ ಚಪ್ಪಲಿಯನ್ನಾಗಲೀ ಧರಿಸುವುದಿಲ್ಲ. ಎಷ್ಟೇ ದೂರ ಹೋಗಬೇಕಾದರೂ ಬರಿಗಾಲಿನಲ್ಲಿ ನಡೆದುಕೊಂಡೇ ಹೋಗುತ್ತಾರೆ. ಆದರೆ, ಬೇಸಿಗೆಯ ಸುಡುಬಿಸಿಲಿನ ಸಂದರ್ಭದಲ್ಲಿ ವೃದ್ಧರು ಪಾದರಕ್ಷೆಗಳನ್ನು ಧರಿಸಲು ಅವಕಾಶವಿದೆ.
ಇಷ್ಟೇ ಅಲ್ಲ. ಈ ಪುಟ್ಟ ಗ್ರಾಮವು ಸಂಜೆ 7 ಗಂಟೆಯಾಗುತ್ತಿದ್ದಂತೆಯೇ ನಿದ್ದೆಗೆ ಜಾರುತ್ತದೆ. ಈ ಸಂದರ್ಭದಲ್ಲಿ ಯಾವುದೇ ಮನೆಯವರು ಗಟ್ಟಿಯಾಗಿ ಮಾತನಾಡುವುದಾಗಲೀ ಅಥವಾ ಮ್ಯೂಸಿಕ್ ಹಾಕುವುದಾಗಲೀ ಮಾಡುವಂತಿಲ್ಲ. ಈ ನಿರ್ಬಂಧಗಳಿದ್ದಾಗ್ಯೂ, ಇಲ್ಲಿನ ಜನರು ಸಂತೋಷದ ಜೀವನ ಸಾಗಿಸುತ್ತಿದ್ದಾರಂತೆ !