ಬ್ರಿಟನ್ನ ಪ್ರಸಿದ್ಧ ಹಾಸಿಗೆಗಳ ಕಂಪನಿಯಾದ ಕ್ರಾಫ್ಟೆಡ್ ಬೆಡ್ಸ್ ನೆಟ್ಫ್ಲಿಕ್ಸ್ & ಚಿಲ್ ಎಂಬ ಐಡಿಯಾಗೆ ಹೊಸ ವ್ಯಾಖ್ಯಾನವನ್ನು ನೀಡಿದೆ. ದಿನವಿಡೀ ಹಾಸಿಗೆಯ ಮೇಲೆ ಮಲಗಿ ನೆಟ್ಫ್ಲಿಕ್ಸ್ ವೀಕ್ಷಿಸುವ ಬ್ರಿಟನ್ ನಿವಾಸಿಗಳಿಗೆ ಈ ಕಂಪನಿಯು ವಾರ್ಷಿಕ 24,82,322.40 ರೂಪಾಯಿಗಳನ್ನು ನೀಡುತ್ತಿದೆ.
‘ಹಾಸಿಗೆ ಪರೀಕ್ಷೆ’ಗೆ ಪ್ರಸ್ತುತ ಕಂಪನಿಯು ಅರ್ಜಿಯನ್ನು ಸ್ವೀಕರಿಸುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು ದಿನವಿಡೀ ಹಾಸಿಗೆ ಮೇಲೆ ಮಲಗಿ ಈ ದೊಡ್ಡ ಮೊತ್ತವನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ಗ್ರಾಹಕರಿಗೆ ಅತ್ಯುತ್ತಮ ದರ್ಜೆಯ ಹಾಸಿಗೆಗಳನ್ನು ನೀಡುವ ಸಲುವಾಗಿ ಈ ಪರೀಕ್ಷೆಯನ್ನು ಆಯೋಜಿಸಿರುವುದಾಗಿ ಕಂಪನಿ ಹೇಳಿದೆ.
ಹಾಸಿಗೆ ಪರೀಕ್ಷಕರಾಗಿ ಆಯ್ಕೆಯಾಗುವ ಸಿಬ್ಬಂದಿಯು ಹೊಸ ಗುಣಮಟ್ಟದ ಹಾಸಿಗೆಗಳನ್ನು ಪ್ರತಿ ವಾರ ಪರೀಕ್ಷೆ ಮಾಡಬೇಕಾಗುತ್ತದೆ. ಇದರ ಜೊತೆಯಲ್ಲಿ ಇನ್ನು ಕೆಲವು ಕರ್ತವ್ಯ ಹಾಗೂ ನಿಯಮಗಳನ್ನು ಪಾಲಿಸಬೇಕು.
ಈ ಕೆಲಸಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ವಾರದಲ್ಲಿ 37.5 ಗಂಟೆಗಳ ಸಮಯವನ್ನು ಹಾಸಿಗೆಯ ಮೇಲೆ ಮಲಗಲು ಮೀಸಲಿಡಬೇಕು. ಈ ಅವಧಿಯಲ್ಲಿ ಸಿಬ್ಬಂದಿಯು ಹಾಸಿಗೆ ಎಷ್ಟು ಆರಾಮದಾಯಕವಾಗಿದೆ ಎಂಬುದರ ಬಗ್ಗೆ ಕಂಪನಿಗೆ ಮಾಹಿತಿ ನೀಡಬೇಕು.
ಪ್ರತಿ ವಾರ ಕಂಪನಿಯು ಹೊಸ ಹಾಸಿಗೆಗಳನ್ನು ಮನೆಗೇ ಕಳುಹಿಸಿಕೊಡುತ್ತದೆ. ಇದರ ಮೇಲೆ ಮಲಗಿ ಹಾಸಿಗೆ ಗುಣಮಟ್ಟದ ಬಗ್ಗೆ ಮಾಹಿತಿ ನೀಡುವುದು ಈ ಸಿಬ್ಬಂದಿಯ ಕೆಲಸವಾಗಿರುತ್ತದೆ. ಈ 37.5 ಗಂಟೆಗಳ ಅವಧಿಯಲ್ಲಿ ನೀವು ಹಾಸಿಗೆಯ ಮೇಲೆ ನಿದ್ರಿಸಬಹುದು ಅಥವಾ ನೆಟ್ಫ್ಲಿಕ್ಸ್ನಲ್ಲಿ ಸಿನಿಮಾ ವೀಕ್ಷಣೆಯನ್ನು ಮಾಡಬಹುದು.
ಇನ್ನು ಈ ವಿಚಾರವಾಗಿ ಮಾತನಾಡಿದ ಕ್ರ್ಯಾಫ್ಟೆಡ್ ಬೆಡ್ಸ್ ಮಾರ್ಕೆಟಿಂಗ್ ಮ್ಯಾನೇಜರ್ ಬ್ರೇನ್ ಡಿಲ್ಲೋನ್, ಗ್ರಾಹಕರನ್ನು ತೃಪ್ತಿಪಡಿಸುವುದೇ ನಮ್ಮ ಗುರಿಯಾಗಿದೆ ಎಂದು ಹೇಳಿದ್ದಾರೆ.
ನಾವು ಗ್ರಾಹಕರಿಂದ ಹಾಸಿಗೆಯ ಗುಣಮಟ್ಟದ ಬಗ್ಗೆ ಉತ್ತಮ ಸ್ಪಂದನೆಯನ್ನು ಪಡೆಯುತ್ತಿದ್ದೇವೆ. ಇದು ಹಾಗೆಯೇ ಮುಂದುವರಿಯಲಿ ಎಂಬುದು ನಮ್ಮ ಆಶಯವಾಗಿದೆ. ಇದೇ ಕಾರಣಕ್ಕಾಗಿ ನಾವು ಈ ಹಾಸಿಗೆ ಪರೀಕ್ಷೆ ಎಂಬ ಯೋಜನೆ ರೂಪಿಸಿದ್ದೇವೆ ಎಂದು ಹೇಳಿದರು.