ಹವಾಮಾನ ಬದಲಾವಣೆ ಮತ್ತು ಅದರ ವೈಪರೀತ್ಯಗಳ ಪರಿಣಾಮಗಳನ್ನು ನಾವು ಬಹಳ ಹತ್ತಿರದಿಂದ ಕಾಣುತ್ತಿದ್ದೇವೆ. ಮಳೆಗಾಲ ಮುಗಿಯುವ ಲಕ್ಷಣಗಳೇ ಕಾಣುತ್ತಿಲ್ಲ.
ಮುಂಗಾರು, ಹಿಂಗಾರುಗಳ ಸಮಯ ಅದಲುಬದಲಾಗಿದೆ. ಬೆಳಗ್ಗೆ ವಿಪರೀತ ಬಿಸಿಲು, ಸಂಜೆಗೆ ಮಳೆ, ರಾತ್ರಿಗೆ ಮೈಕೊರೆಯುವ ಚಳಿಯಂತಹ ವಿಚಿತ್ರ ವಾತಾವರಣ ನಮ್ಮ ಸುತ್ತಲೂ ನಿರ್ಮಾಣಗೊಂಡಾಗಿದೆ.
ಇದರಿಂದಾಗಿ ಮಕ್ಕಳು ಸೇರಿದಂತೆ ಅನೇಕ ಹಿರಿಯರಿಗೂ ತಿಂಗಳುಗಟ್ಟಲೆ ಅನಾರೋಗ್ಯ ಕಾಡುತ್ತಿದೆ. ಕೆಮ್ಮು, ಶೀತವಂತೂ ಸಾಮಾನ್ಯ ಕಾಯಿಲೆಗಳಾಗಿ, 100ರಲ್ಲಿ 70 ಮಂದಿಯಲ್ಲಿ ಕಾಣಿಸಿಕೊಳ್ಳುತ್ತಿವೆ.
ಇಂಥ ಅಪಾಯಕಾರಿ ಮತ್ತು ನೈಸರ್ಗಿಕ ವಿಕೋಪದ ಲಕ್ಷಣಗಳನ್ನು ಅಮೆರಿಕದ ಮಹಿಳಾ ವಿಜ್ಞಾನಿಯೊಬ್ಬರು 150 ವರ್ಷಗಳ ಮುನ್ನವೇ ಊಹಿಸಿದ್ದರು. ಜಾಗತಿಕ ತಾಪಮಾನ ಏರಿಕೆಯಿಂದ ಎದುರಾಗುವ ಪ್ರಕೃತಿಯ ಮುನಿಸು ಕುರಿತು ಅವರು 1856ರಲ್ಲಿಯೇ ಪುಸ್ತಕವೊಂದನ್ನು ಕೂಡ ಬರೆದಿದ್ದರಂತೆ.
’’ಆನ್ ದಿ ಹೀಟ್ ಆ್ಯಂಡ್ ದಿ ಸನ್ಸ್ ರೇಸ್’ ಎಂದು ಅದರ ಹೆಸರು. ಸದ್ಯಕ್ಕೆ ಈ ಪುಸ್ತಕ ಗೂಗಲ್‌ನಲ್ಲಿ ಇ-ಪುಸ್ತಕದ ರೂಪದಲ್ಲಿ ಲಭ್ಯವಿದೆಯಂತೆ. ಅಂದಹಾಗೆ, ಆ ವಿಜ್ಞಾನಿಯ ಹೆಸರು ಯುನೀಸ್ ನ್ಯೂಟನ್ ಫೂಟೆ.
ಹೆಚ್ -1 ಬಿ ವೀಸಾ: ಭಾರತೀಯರಿಗೆ ಗುಡ್ ನ್ಯೂಸ್; ಸಂಗಾತಿಗೂ ಉದ್ಯೋಗಾವಕಾಶ
2011ರವರೆಗೆ ಇವರಿಗೆ ಹವಾಮಾನ ವೈಪರೀತ್ಯದ ಕುರಿತಾದ ಸಂಶೋಧನೆಯ ಶ್ರೇಯವೇ ಸಿಕ್ಕಿರಲಿಲ್ಲ. ಬದಲಾಗಿ, 1859ರಲ್ಲಿ ಇಂಗಾಲದ ಡೈ-ಆಕ್ಸೈಡ್ ಮತ್ತು ನೀರಿನ ಆವಿಯ ಶಾಖದ ಉತ್ಪನ್ನವು ವಾತಾವರಣವನ್ನು ಬದಲಾಯಿಸುವ ಬಗ್ಗೆ ಬರೆದ ಐರಿಷ್ ಭೌತಶಾಸ್ತ್ರಜ್ಞ ಜಾನ್ ಟಿಂಡಾಲ್‌ಗೆ ಅಗ್ರ ಶ್ರೇಯ ನೀಡಲಾಗಿತ್ತು.
ಕೇವಲ ಎರಡು ಸಿಲಿಂಡರ್, ಅದಕ್ಕೆ ಮರ್ಕ್ಯೂರಿ ಥರ್ಮಾಮೀಟರ್ ಅಳವಡಿಸಿ, ಸೂರ್ಯನ ಕಿರಣಗಳ ಶಾಖದಿಂದ ಗಾಳಿಯಲ್ಲಿನ ನೀರಿನ ಹನಿಗಳು ಬಿಸಿಯಾಗುವ ಪ್ರಕ್ರಿಯೆಯನ್ನು ಫೂಟೆ ಗಮನಿಸಿದ್ದರು.
ಅದು ಕೂಡ ಇಂಗಾಲದ ಡೈ ಆಕ್ಸೈಡ್ ತುಂಬಿರುವ ಸಿಲಿಂಡರ್‌ನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ತೇವಾಂಶ ಭರಿತ ಗಾಳಿಯು ಬಿಸಿಯಾಗುತ್ತದೆ ಎಂದು ಸಂಶೋಧಿಸಿದ್ದರು. ಆ ವೇಳೆ ಅವರ ಈ ಸಂಶೋಧನೆಯನ್ನು ವಿಜ್ಞಾನಿಗಳ ಸಮೂಹ ಮತ್ತು ಜನರು ಗಂಭೀರವಾಗಿ ಪರಿಗಣಿಸಿರಲೇ ಇಲ್ಲ. ಆದರೆ, ಸದ್ಯ ವಿಶ್ವವನ್ನೇ ಬಾಧಿಸುತ್ತಿರುವುದು ಇದೇ ಹಸಿರುಮನೆ ಅನಿಲಗಳ ಪ್ರಕ್ರಿಯೆಯಿಂದ ಹೆಚ್ಚುತ್ತಿರುವ ಜಾಗತಿಕ ತಾಪಮಾನ.
ವಿಶ್ವದ ಎಲ್ಲ ರಾಷ್ಟ್ರಗಳು ಒಟ್ಟಾಗಿ ಈಗಲೇ ಎಚ್ಚರಿಕೆ ವಹಿಸಿ, ತಮ್ಮಿಂದ ವಾತಾವರಣಕ್ಕೆ ಹೊರ ಸೂಸಲಾಗುತ್ತಿರುವ ಇಂಗಾಲದ ಪ್ರಮಾಣವನ್ನು ಶೂನ್ಯಗೊಳಿಸಿದರೂ ಕೂಡ 2050ಕ್ಕೆ ಜಾಗತಿಕ ತಾಪಮಾನ 1.5 ಡಿಗ್ರಿ ಸೆಲ್ಸಿಯಸ್ ಏರಿಕೆ ಕಾಣುವುದು ನಿಶ್ಚಿತ ಎಂದು ವಿಶ್ವಸಂಸ್ಥೆ ವರದಿ ಆತಂಕ ವ್ಯಕ್ತಪಡಿಸಿದೆ.