ಪ್ರಸಿದ್ಧ ಲೇಖಕಿ ಸುಸಾನ್ ಮೀಚೆನ್ ಮೃತಪಟ್ಟಿರುವುದಾಗಿ ಆಕೆಯ ಮಗಳು 2020ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದಾಗ, ಅದಕ್ಕೆ ಹಲವರು ಸಂತಾಪ ಸೂಚಿಸಿದ್ದರು. ಆಕೆಯ ಹಲವು ವಸ್ತುಗಳನ್ನು ಇದೇ ಸಂದರ್ಭದಲ್ಲಿ ಹರಾಜಿಗೆ ಇಡಲಾಗಿತ್ತು. ಇದರಿಂದ ಚೆನ್ನಾಗಿ ಆದಾಯವೂ ಬಂದಿತ್ತು. ಈಕೆ ಹೆಚ್ಚಾಗಿ ಪ್ರಣಯಕ್ಕೆ ಸಂಬಂಧಿಸಿದ ಲೇಖನಗಳನ್ನು ಬರೆಯುತ್ತಿದ್ದಳು.
ಸಾವಿನ ಸುದ್ದಿ ಬಂದ ಕೆಲವು ದಿನಗಳ ಬಳಿಕ ಆಕೆಯ ಫೇಸ್ಬುಕ್ ಖಾತೆ ಚಾಲ್ತಿಯಲ್ಲಿ ಬಂತು. ಆಗ ಮಗಳು ತಾನು ಅಮ್ಮನ ಪರವಾಗಿ ಆಕೆಯ ಈ ಖಾತೆಯನ್ನು ಬಳಸಿಕೊಳ್ಳುತ್ತಿದ್ದೇನೆ. ನನ್ನ ತಾಯಿ ಅರ್ಧ ಬರೆದಿರುವ ಲೇಖನಗಳನ್ನು ಪೂರ್ಣಗೊಳಿಸುತ್ತಿದ್ದೇನೆ ಎಂದಿದ್ದರು.
ಎರಡು ವರ್ಷಗಳ ಬಳಿಕ ಸತ್ತುಹೋಗಿದ್ದ ಲೇಖಕಿ ಸುಸಾನ್ ಮೀಚೆನ್ ದಿಢೀರ್ ಕಾಣಿಸಿಕೊಂಡು ಎಲ್ಲರನ್ನೂ ದಿಗ್ಭ್ರಮೆಗೊಳಿಸಿದ್ದಾಳೆ. ಈ ಬಗ್ಗೆ ಪ್ರಶ್ನೆ ಕೇಳಿದಾಗ, ತಾನು ತಮಾಷೆ ಮಾಡಿದ್ದು, ತಾನಿನ್ನೂ ಬದುಕಿರುವುದಾಗಿ ಹೇಳಿಕೊಂಡಿದ್ದಾಳೆ. ದಿ ವಾರ್ಡ್ ಎಂಬ ಗ್ರೂಪ್ನಲ್ಲಿ ಇದನ್ನು ಶೇರ್ ಮಾಡಿಕೊಂಡ ನಂತರ ಜನರ ಆಕ್ರೋಶಕ್ಕೆ ಕಾರಣವಾಗಿದ್ದಾಳೆ.
ಸಾಮಾಜಿಕ ಜಾಲತಾಣದಲ್ಲಿ ಈಕೆಯ ವಿರುದ್ಧ ಹಲವರು ಕಿಡಿ ಕಾರುತ್ತಿದ್ದಾರೆ. ಮೃತಪಟ್ಟಿರುವುದಾಗಿ ಘೋಷಿಸಿಕೊಂಡು ವಸ್ತುಗಳನ್ನು ಹರಾಜು ಮಾಡಿ ದುಡ್ಡು ಗಳಿಸುವ ಸಲುವಾಗಿ ಹೀಗೆ ಮಾಡಿದ್ದಾರೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಈ ಎರಡು ವರ್ಷಗಳಲ್ಲಿ ಲೇಖನ ಬರೆಯುವುದನ್ನು ಬಿಟ್ಟು ಈಕೆ ಟಿಕ್ಟಾಕ್ನಲ್ಲಿ ಕಾಣಿಸಿಕೊಂಡಿರುವುದು ತಿಳಿದು ಜನರು ಮತ್ತಷ್ಟು ಆಕ್ರೋಶಗೊಂಡಿದ್ದಾರೆ.