alex Certify ನಂಬಲಸಾಧ್ಯವಾದರೂ ಸತ್ಯ: ಪ್ರತೀಕಾರ ತೀರಿಸಿಕೊಳ್ಳಲು 22 ಕಿ.ಮೀ. ದೂರ ಸಾಗಿ ಬಂದ ಕೋತಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಂಬಲಸಾಧ್ಯವಾದರೂ ಸತ್ಯ: ಪ್ರತೀಕಾರ ತೀರಿಸಿಕೊಳ್ಳಲು 22 ಕಿ.ಮೀ. ದೂರ ಸಾಗಿ ಬಂದ ಕೋತಿ..!

ಚಿಕ್ಕಮಗಳೂರು: ಹಾವಿನ ದ್ವೇಷ 12 ವರ್ಷ ಅಂತಾರೆ. ಆದರೆ ಇದು ನಿಜವೋ, ಸುಳ್ಳೋ ಗೊತ್ತಿಲ್ಲ. ಆದರೆ ಇಲ್ಲೊಂದೆಡೆ ಮಂಗವೊಂದರ ಪ್ರತೀಕಾರ ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಪಡುತ್ತೀರಿ.. ಈ ಮಂಗ ಪ್ರತೀಕಾರ ತೀರಿಸಿಕೊಳ್ಳಲು 22 ಕಿ.ಮೀ ದೂರ ಸಾಗಿ ಬಂದಿದೆ.

ಈ ವಿಚಿತ್ರ ಘಟನೆ ನಡೆದಿದ್ದು, ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರದಲ್ಲಿ. ಸುಮಾರು 5 ವರ್ಷ ವಯಸ್ಸಿನ ಬೋನೆಟ್ ಮಕಾಕ್ ಜಾತಿಯ ಗಂಡು ಕೋತಿ ಆಟೋಚಾಲಕ ಜಗದೀಶ್ ಬಿ.ಬಿ. ಜೀವನದಲ್ಲಿ ಖಳನಾಯಕನಾಗಿದ್ದಾನೆ.

ಏನಿದು ಘಟನೆ..?

ಹಣ್ಣುಗಳನ್ನು, ತಿಂಡಿ ಪೊಟ್ಟಣಗಳನ್ನು ಕಸಿದುಕೊಂಡು ಕೊಟ್ಟಿಗೆಹಾರದಲ್ಲಿ ಈ ಕೋತಿ ತಿರುಗಾಡುತ್ತಿತ್ತು. ಯಾವುದೇ ಕೋತಿಯ ಸಾಮಾನ್ಯ ಸ್ವಭಾವವಾದ್ದರಿಂದ ಜನರು ಈ ಬಗ್ಗೆ ಹೆಚ್ಚು ಚಿಂತಿಸಲಿಲ್ಲ. ಆದರೆ ಬರುಬರುತ್ತಾ ಇದರ ಉಪಟಳ ಹೆಚ್ಚಾಗಿದೆ. ಹೀಗಾಗಿ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು.

ಗ್ರಾಮಸ್ಥರ ದೂರು ಕೇಳಿ ಕೋತಿ ಹಿಡಿಯಲು ಬಂದ ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸಪಟ್ಟಿದೆ. ಗ್ರಾಮಸ್ಥರು ಕೂಡ ಅರಣ್ಯ ಇಲಾಖೆಗೆ ಕೋತಿ ಹಿಡಿಯಲು ಸಾಥ್ ಕೊಟ್ಟಿದ್ದಾರೆ. ಆಟೋ ಚಾಲಕ ಜಗದೀಶ್ ಸಹ ಅರಣ್ಯ ಇಲಾಖೆಯ ತಂಡಕ್ಕೆ ಸಹಾಯ ಮಾಡುವುದಕ್ಕಾಗಿ ಕೋತಿಯನ್ನು ವಿರುದ್ಧ ದಿಕ್ಕಿಗೆ ಓಡಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಕೋಪಗೊಂಡ ಮಂಗ ಇದ್ದಕ್ಕಿದ್ದಂತೆ ಆತನ ಮೇಲೆ ದಾಳಿ ಮಾಡಿದೆ. ಮಂಗವು ಜಗದೀಶ್ ನ ಕೈಯನ್ನು ಬಲವಾಗಿ ಕಚ್ಚಿ, ಗಾಯಗೊಳಿಸಿದೆ.

ಮಂಗದ ದಾಳಿಯಿಂದ ಭಯಗೊಂಡ ಜಗದೀಶ್ ಸ್ಥಳದಿಂದ ಓಡಿಹೋಗಿದ್ದಾನೆ. ಎಲ್ಲಿ ಹೋದರೂ ಕೋತಿ ಅವನನ್ನು ಬೆನ್ನಟ್ಟಿದೆ. ತನ್ನ ಆಟೋ ರಿಕ್ಷಾದೊಳಗೆ ಅಡಗಿಕೊಂಡರೂ ಅದು ವಾಹನದ ಮೇಲೆ ದಾಳಿ ಮಾಡಿ ಹೊದಿಕೆಯ ಹಾಳೆಗಳನ್ನು ಕಿತ್ತು ಹಾಕಿದೆ.

ಶಾಲಾ –ಕಾಲೇಜ್ ಗಳಲ್ಲಿ ಶೇ. 100 ಹಾಜರಾತಿ, ಪಾಸಿಟಿವಿಟಿ ಕಡಿಮೆ ಇರುವ ಜಿಲ್ಲೆಗಳಿಗೆ ಬಿಗ್ ರಿಲೀಫ್

ಕೆಲಕಾಲ ಕಪಿ ಚೇಷ್ಟೆ ಮುಂದುವರಿದೆ. 30 ಕ್ಕೂ ಹೆಚ್ಚು ಜನರ ಕಾರ್ಯಾಚರಣೆಯ ನಂತರ ಕೋತಿಯನ್ನು ಯಶಸ್ವಿಯಾಗಿ ಸೆರೆಹಿಡಿಯಲಾಯಿತು. ಅರಣ್ಯ ಇಲಾಖೆ ಅಧಿಕಾರಿಗಳು ಈ ಕೋತಿಯನ್ನು ಸುಮಾರು 22 ಕಿ.ಮೀ ದೂರದ ಬಾಳೂರು ಅರಣ್ಯದಲ್ಲಿ ಬಿಡುಗಡೆ ಮಾಡಿದ್ದಾರೆ.

ಪ್ರತೀಕಾರ ತೀರಿಸಲು ವಾಪಸ್ ಬಂತು ಕೋತಿ..!

ಇಷ್ಟಕ್ಕೆ ಈ ಕತೆ ಮುಗಿದಿಲ್ಲ. ಅಬ್ಬಾ….! ಕೋತಿ ಹೋಯಿತು ಎಂದು ಗ್ರಾಮಸ್ಥರು ನಿಟ್ಟುಸಿರು ಬಿಡುವಷ್ಟರಲ್ಲಿ, 22 ಕಿ.ಮೀ. ದೂರ ಹೋಗಿ ಬಿಟ್ಟು ಬಂದಿದ್ದ ಈ ಕೋತಿ ಕೊಟ್ಟಿಗೆಹಾರಕ್ಕೆ ಮತ್ತೆ ವಾಪಸ್ ಬಂದಿದೆ. ನಂಬುತ್ತಿರೋ, ಬಿಡುತ್ತಿರೋ ಕೇವಲ ನಾಲ್ಕೇ ದಿನದಲ್ಲಿ ಈ ಗ್ರಾಮಕ್ಕೆ ಕೋತಿ ಮರಳಿದೆ. ಬಾಳೂರು ಅರಣ್ಯದ ಬಳಿ ರಸ್ತೆಯ ಮೂಲಕ ಸಾಗಿದ ಲಾರಿಗೆ ಹಾರಿ ಮತ್ತೆ ಗ್ರಾಮಕ್ಕೆ ಮರಳಿದೆ.

ಇನ್ನು ಕೋತಿ ಮತ್ತೆ ಬಂದಿರುವ ಸುದ್ದಿ ತಿಳಿದು ಜಗದೀಶ್ ಥರಥರನೇ ನಡುಗಿಹೋಗಿದ್ದಾರೆ. ಅರಣ್ಯ ಇಲಾಖೆಯ ತಂಡವು ಎರಡನೇ ಬಾರಿಗೆ ಕಾರ್ಯಾಚರಣೆ ನಡೆಸಿ ಸೆಪ್ಟೆಂಬರ್ 22 ರಂದು ಕೋತಿಯನ್ನು ಹಿಡಿದು, ಮತ್ತಷ್ಟು ದೂರದ ಅರಣ್ಯ ಪ್ರದೇಶದಲ್ಲಿ ಬಿಡುಗಡೆ ಮಾಡಿದ್ದಾರೆ. ಕೋತಿ ಹಿಂತಿರುಗುವುದಿಲ್ಲ ಎಂದು ಜಗದೀಶ್ ಆಶಿಸಿದ್ದಾರೆ.

“ಕೋತಿ ಒಬ್ಬ ವ್ಯಕ್ತಿಯನ್ನು ಏಕೆ ಟಾರ್ಗೆಟ್ ಮಾಡಿದೆ ಎಂದು ನಮಗೆ ತಿಳಿದಿಲ್ಲ. ಆತ ಪ್ರಾಣಿಗೆ ಈ ಹಿಂದೆ ಏನಾದರೂ ಹಾನಿ ಮಾಡಿದ್ದಾನೋ ಅಥವಾ ಅದು ತಕ್ಷಣದ ಪ್ರತಿಕ್ರಿಯೆಯೋ ನಮಗೆ ಗೊತ್ತಿಲ್ಲ. ಆದರೆ, ಕೋತಿಗಳು ಈ ರೀತಿ ವರ್ತಿಸುವುದನ್ನು ನಾವು ನೋಡುತ್ತಿರುವುದು ಇದೇ ಮೊದಲು” ಎಂದು ಮೂಡಿಗೆರೆಯ ರೇಂಜ್ ಫಾರೆಸ್ಟ್ ಆಫೀಸರ್ ಮೋಹನ್ ಕುಮಾರ್ ಬಿ.ಜಿ. ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...