
ಮೊದಲೆಲ್ಲ ಜನರು ತಮ್ಮ ಸಮಯ ಉಳಿತಾಯ ಮಾಡೋದಕ್ಕಾಗಿ ಶೌಚಾಲಯಕ್ಕೆ ಹೋಗುವ ವೇಳೆ ದಿನ ಪತ್ರಿಕೆಗಳನ್ನ ತೆಗೆದುಕೊಂಡು ಹೋಗ್ತಿದ್ರು. ಇದೀಗ ಈ ಜಾಗವನ್ನ ಸ್ಮಾರ್ಟ್ ಫೋನ್ಗಳು ಪಡೆದುಕೊಂಡಿವೆ. ಮೊಬೈಲ್ ಫೋನ್ಗಳನ್ನ ಬಳಕೆ ಮಾಡುತ್ತಾ ಮಾಡುತ್ತಾ ಜನರು ತಾಸುಗಟ್ಟಲೇ ಸಮಯವನ್ನ ಶೌಚಾಲಯದಲ್ಲೇ ಕಳೆದು ಬಿಡ್ತಾರೆ. ವಾಟ್ಸಾಪ್, ಫೇಸ್ಬುಕ್, ಇನ್ಸ್ಟಾಗ್ರಾಂ, ಟ್ವಿಟರ್ ಅಂತಾ ಸಮಯ ಸರಿದಿದ್ದೇ ತಿಳಿಯೋದಿಲ್ಲ. ಆದರೆ ನೆನಪಿಡಿ ಈ ಅಭ್ಯಾಸದಿಂದಾಗಿ ನೀವು ಕೆಟ್ಟ ಕಾಯಿಲೆಗಳನ್ನ ಬರ ಮಾಡಿಕೊಳ್ಳುತ್ತಿದ್ದೀರಾ..!
ಮನೆಯ ಎಲ್ಲಾ ಸ್ಥಳಗಳಿಗಿಂತ ಹೆಚ್ಚಿನ ಸೂಕ್ಷ್ಮ ಜೀವಿಗಳು ಶೌಚಾಲಯದಲ್ಲೇ ಸ್ಥಾನ ಪಡೆದಿರುತ್ತವೆ. ಹೀಗಾಗಿ ಈ ಸ್ಥಳಕ್ಕೆ ನೀವು ಮೊಬೈಲ್ ಕೊಂಡೊಯ್ದರೆ ನಿಮ್ಮ ಮೊಬೈಲ್ ಕೂಡ ಬ್ಯಾಕ್ಟೀರಿಯಾದ ಸಂಪರ್ಕಕ್ಕೆ ಬರುತ್ತೆ. ಶೌಚಾಲಯದ ಬಾಗಿಲು, ಫ್ಲಶ್, ಅಲ್ಲಿರುವ ಬಕೆಟ್ಗಳನ್ನ ಮುಟ್ಟಿದ ಕೈಯಲ್ಲೇ ನೀವು ಮೊಬೈಲ್ ಮುಟ್ಟೋದ್ರಿಂದ ಸಲ್ಮೋನೆಲ್ಲಾ, ಇ -ಕೊಲಿ, ಸಿ – ಡಿಫಿಸೈಲ್ನಂತಹ ಮಾರಕ ಸೂಕ್ಷ್ಮಾಣು ಜೀವಿಗಳು ನಿಮ್ಮ ಸಂಪರ್ಕಕ್ಕೆ ಬರುತ್ತೆ.
ಶೌಚಾಲಯದಲ್ಲಿ ಮೊಬೈಲ್ ಬಳಕೆ ಮಾಡೋದು ಆರೋಗ್ಯಕ್ಕೆ ಎಷ್ಟು ಹಾನಿಕರ ಅನ್ನೋದನ್ನ ನೀವು ಊಹಿಸಿಕೊಳ್ಳೋಕೂ ಸಾಧ್ಯವಿಲ್ಲ. ಶೌಚಾಲಯಕ್ಕೆ ಮೊಬೈಲ್ ತೆಗೆದುಕೊಂಡು ಹೋಗುವವರು ಹೆಚ್ಚಿನ ಸಮಯವನ್ನ ಅಲ್ಲೇ ಕಳೆಯುತ್ತಾರೆ. ಇದರಿಂದ ರಕ್ತಸ್ರಾವದ ಸಮಸ್ಯೆ ಉಂಟಾಗಬಹುದು. ಅಲ್ಲದೇ ಗುದದ್ವಾರದಲ್ಲಿ ನೋವು, ಊದಿಕೊಳ್ಳುವುದು ಹೀಗೆ ನಾನಾ ಸಮಸ್ಯೆಗಳು ಉಂಟಾಗುತ್ತದೆ.
ಟಾಯ್ಲೆಟ್ ಹೋಗಿ ಬಂದ ಬಳಿಕ ಕೈಯನ್ನ ತೊಳೆದುಕೊಳ್ಳಬಹುದು. ಹಾಗಂತ ಮೊಬೈಲ್ನ್ನು ತೊಳೆಯೋಕೆ ಸಾಧ್ಯವಿಲ್ಲ. ಹೀಗಾಗಿ ಆದಷ್ಟು ಅಭ್ಯಾಸವನ್ನ ಕೊನೆ ಮಾಡಿ. ಒಂದು ವೇಳೆ ಮೊಬೈಲ್ ತೆಗೆದುಕೊಂಡು ಹೋಗಲೇಬೇಕಾದ ಪರಿಸ್ಥಿತಿ ಬಂತು ಅಂದರೆ ಆಲ್ಕೋಹಾಲ್ ಅಂಶವುಳ್ಳ ಸ್ಯಾನಿಟೈಸರ್ನಿಂದ ವಾಶ್ ಮಾಡಿ. ಶೌಚಾಲಯದಲ್ಲಿ 10 ನಿಮಿಷಕ್ಕಿಂತ ಹೆಚ್ಚು ಕಾಲ ಇರಲೇಬೇಡಿ.