
ಹಾಲು ಮತ್ತು ತುಪ್ಪ ಇವೆರಡನ್ನೂ ನಿಯಮಿತವಾಗಿ ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಸಾಕಷ್ಟು ಪೋಷಕಾಂಶಗಳು ದೊರೆಯುತ್ತವೆ. ಇವೆರಡನ್ನೂ ಒಟ್ಟಿಗೆ ಸೇವಿಸುವುದರಿಂದ ಅನೇಕ ಪ್ರಯೋಜನಗಳಿವೆ. ಹಾಲಿಗೆ ತುಪ್ಪ ಸೇರಿಸಿ ಸೇವಿಸಿದಾಗ ಅವುಗಳ ಲಾಭ ದುಪ್ಪಟ್ಟಾಗುತ್ತದೆ.
ಏಕೆಂದರೆ ವಿಟಮಿನ್ ಎ ಮತ್ತು ವಿಟಮಿನ್ ಕೆ ನಂತಹ ಪೋಷಕಾಂಶಗಳು, ಪ್ರೋಟೀನ್‌ಗಳು ಮತ್ತು ಎಂಟಿಒಕ್ಸಿಡೆಂಟ್‌ಗಳು ತುಪ್ಪದಲ್ಲಿ ಹೇರಳವಾಗಿ ಕಂಡುಬರುತ್ತವೆ. ಹಾಲಿನಲ್ಲಿ ವಿಟಮಿನ್ ಡಿ, ಪ್ರೋಟೀನ್, ಕ್ಯಾಲ್ಸಿಯಂ ಸಮೃದ್ಧವಾಗಿದೆ. ಹಾಲಿಗೆ ತುಪ್ಪ ಬೆರೆಸಿಕೊಂಡು ಕುಡಿಯುವುದು ಪುರಾತನ ಆಯುರ್ವೇದದ ಸೂತ್ರವಾಗಿದೆ.
ಜೀರ್ಣಕ್ರಿಯೆಗೆ ಸಹಕಾರಿ…
ಹಾಲಿನಲ್ಲಿರುವ ತುಪ್ಪವು ದೇಹದೊಳಗಿನ ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುವ ಮೂಲಕ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಈ ಕಿಣ್ವಗಳು ಸಂಕೀರ್ಣ ಆಹಾರಗಳನ್ನು ಸರಳ ಆಹಾರಗಳಾಗಿ ಒಡೆಯುತ್ತವೆ. ಇದು ದೇಹದಲ್ಲಿ ಉತ್ತಮ ಜೀರ್ಣಕ್ರಿಯೆಗೆ ಕಾರಣವಾಗುತ್ತದೆ.
ನಿದ್ದೆಗೆ ಪೂರಕ…
ತುಪ್ಪ ಒತ್ತಡವನ್ನು ಕಡಿಮೆ ಮಾಡುವ ಮೂಲಕ ನಮ್ಮ ಮನಸ್ಸು ಫ್ರೆಶ್ ಆಗಿರುವಂತೆ ನೋಡಿಕೊಳ್ಳುತ್ತದೆ. ಒಂದು ಲೋಟ ಬೆಚ್ಚಗಿನ ಹಾಲಿಗೆ ತುಪ್ಪ ಬೆರೆಸಿ ಸೇವಿಸಿದರೆ ನರಗಳು ಶಾಂತವಾಗಿ ಒಳ್ಳೆಯ ನಿದ್ದೆ ಬರುತ್ತದೆ.
ಕೀಲು ನೋವು…
ಕೀಲು ನೋವಿನ ಸಮಸ್ಯೆಯಿದ್ದರೆ ನಿಯಮಿತವಾಗಿ ಹಾಲಿಗೆ ತುಪ್ಪ ಸೇರಿಸಿಕೊಂಡು ಕುಡಿಯಬೇಕು. ಹಾಲಿನಲ್ಲಿ ಕ್ಯಾಲ್ಸಿಯಂ ಹೇರಳವಾಗಿ ಕಂಡುಬರುತ್ತದೆ ಮತ್ತು ತುಪ್ಪದಲ್ಲಿ ವಿಟಮಿನ್ ಕೆ 2 ಪ್ರಮಾಣವು ಉತ್ತಮವಾಗಿದೆ. ಈ ಜೀವಸತ್ವಗಳು ಮೂಳೆಗಳಿಗೆ ತುಂಬಾ ಪ್ರಯೋಜನಕಾರಿ. ಹಾಲಿಗೆ ತುಪ್ಪ ಬೆರೆಸಿ ಕುಡಿದರೆ ಕೀಲುನೋವು ನಿವಾರಣೆಯಾಗುತ್ತದೆ.
ಚರ್ಮಕ್ಕೆ ಹೊಳಪು…
ತುಪ್ಪ ಮತ್ತು ಹಾಲು ಎರಡೂ ನೈಸರ್ಗಿಕ ಆರ್ಧ್ರಕಗಳಾಗಿವೆ. ತುಪ್ಪವು ಒಳಗಿನಿಂದಲೇ ಚರ್ಮವನ್ನ ಹೈಡ್ರೇಟ್ ಮಾಡುತ್ತದೆ. ಪ್ರತಿದಿನ ಸಂಜೆ ಹಾಲು ಮತ್ತು ತುಪ್ಪವನ್ನು ಸೇರಿಸಿ ಕುಡಿಯುವುದರಿಂದ ತ್ವಚೆಯ ಕಾಂತಿ ಹೆಚ್ಚುತ್ತದೆ.
ಚಯಾಪಚಯ…
ಮಲಗುವ ವೇಳೆ ಹಾಲಿಗೆ ತುಪ್ಪ ಬೆರೆಸಿ ಕುಡಿಯುವುದರಿಂದ ಚಯಾಪಚಯ ಕ್ರಿಯೆ ಉತ್ತಮಗೊಳ್ಳುತ್ತದೆ. ಇದು ದೇಹದ ತೂಕವನ್ನು ಕಡಿಮೆ ಮಾಡಲು ಸಹ ನಿಮಗೆ ಸಹಾಯ ಮಾಡುತ್ತದೆ. ಇದಲ್ಲದೇ ಹಾಲು ಮತ್ತು ತುಪ್ಪವನ್ನು ಬೆರೆಸಿ ಕುಡಿಯುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.